ಇತ್ತೀಚೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ನಡೆಸಿದ ಅಧ್ಯಯನದಲ್ಲಿ ಕೋವಿಡ್‌ನಿಂದ ಗುಣಮುಖರಾದ 3-4 ವಾರಗಳ ಬಳಿಕ ಹೃದಯಾಘಾತ ಹೆಚ್ಚಳವಾಗುತ್ತಿರುವುದು ತಿಳಿದುಬಂದಿದೆ. ಅದರಲ್ಲೂ ಎರಡನೇ ಅಲೆಯಲ್ಲಿ ವಯಸ್ಕರಿಗೇ ಹೆಚ್ಚಾಗಿ ಕೋವಿಡ್ ಬಾಧಿಸಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರು ದೈಹಿಕವಾಗಿ ಸಂಪೂರ್ಣ ನಿಶ್ಶಕ್ತಿ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ಹೃದಯಾಘಾತ ಸಂಭವ ಹೆಚ್ಚಳವನ್ನು ವೈದ್ಯರು ತಳ್ಳಿ ಹಾಕುವುದಿಲ್ಲ.
ಈ ಕುರಿತು ವಿಶ್ವ ಹೃದಯ ದಿನದ ಅಂಗವಾಗಿ ಮಾತನಾಡಿರುವ ಫೋರ್ಟಿಸ್ ಆಸ್ಪತ್ರೆ ಹೃದಯತಜ್ಞ ಡಾ. ಆರ್. ಕೇಶವ, ಕೋವಿಡ್ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ 50 ವರ್ಷ ಒಳಗಿನ ಹಾಗೂ ಕೋವಿಡ್‌ನಿಂದ ಹೆಚ್ಚು ಬಾಧಿತರೇ ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಕೋವಿಡ್‌ನಿಂದ ಗುಣವಾದ ಮೂರು ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಂಭವನೀಯ ಹೃದಯಾಘಾತ ತಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಬಳಿಕ ಹೃದಯ ಆರೈಕೆ ಹೇಗೆ?
ಕೋವಿಡ್‌ನಿಂದ ಗುಣವಾದ ಬಳಿಕ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿರುತ್ತದೆ. ಹೀಗಾಗಿ, ದೇಹಕ್ಕೆ ಅಗತ್ಯ ಪ್ರೋಟಿನ್‌ಯುಕ್ತ ಆಹಾರ ನೀಡುವುದು, ವ್ಯಾಯಾಮ, ಯೋಗ, ಧ್ಯಾನ ಮಾಡುವುದು, ಧೂಮಪಾನ, ಮದ್ಯಪಾನ ತ್ಯಜಿಸುವುದು, ಜಂಕ್ ಫುಡ್ ಸೇವನೆ ನಿಯಂತ್ರಣ ಸೇರಿದಂತೆ ಇತರೆ ಅನಾರೋಗ್ಯಕರ ಹವ್ಯಾಸವನ್ನು ತ್ಯಜಿಸಿ, ಹೃದಯದ ಆರೈಕೆಗೆ ಒತ್ತು ನೀಡಬೇಕು. ಅಲ್ಲದೆ, ಕೆಲಸದ ಒತ್ತಡ ಕೂಡ ಹೃದಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಕನಿಷ್ಠ 3 ತಿಂಗಳು ಹೃದಯದ ಆರೋಗ್ಯದತ್ತ ಎಚ್ಚರಿಕೆಯಿಂದಿರುವುದು ಒಳ್ಳೆಯದು ಎನ್ನುತ್ತಾರವರು.
ಯುವಕರಲ್ಲೇ ಹೃದಯಾಘಾತ ಹೆಚ್ಚಳ:
ಹಿಂದೆಲ್ಲಾ ವಯಸ್ಸಾದ ಬಳಿಕ ಹೃದಯಾಘಾತದ ಬಗ್ಗೆ ಎಲ್ಲೋ ಒಂದೊಂದು ಪ್ರಕರಣ ಕಂಡುಬರುತ್ತಿತ್ತು. ಆದರೀಗ 45 ವರ್ಷ ಒಳಗಿನ ಮಧ್ಯವಯಸ್ಕರಲ್ಲಿ ಹೃದಯ ಸಮಸ್ಯೆ ಹಾಗೂ ಹೃದಯಾಘಾತ ಹೆಚ್ಚಳವಾಗಿದೆ. 2017ರ ಅಧ್ಯಯನದ ಪ್ರಕಾರ ವರ್ಷಕ್ಕೆ 4 ಲಕ್ಷ ಮಧ್ಯ ವಯಸ್ಕರೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಿದೆ. ಹೀಗಾಗಿ ಯುಕವರು ಜೀವನ ಶೈಲಿಯಲ್ಲಿ ಶಿಸ್ತು ರೂಢಿಸಿಕೊಂಡರೇ ಹೃದಯಾಘಾತದಿಂದ ಪಾರಾಗಬಹುದು.
ಲಸಿಕೆ ಪರಿಣಾಮಕಾರಿ:
ಹೃದಯದ ಸಮಸ್ಯೆ ಇರುವವರು ಆದ್ಯತೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳವೇಕು ನೀಡುತ್ತಾರೆ. ಅಲ್ಲದೆ, ಇದು ಅಧ್ಯಯನದಿಂದಲೂ ದೃಢಪಟ್ಟಿದೆ. ಕೋವಿಡ್‌ನಿಂದಾಗ ಬಹುದಾದ ಆರೋಗ್ಯ ಸಮಸ್ಯೆಯನ್ನು ಲಸಿಕೆ ತಡೆಯುವುದರಿಂದ ಹೃದಯದ ಸಮಸ್ಯೆ ಇರುವವರ ಆರೋಗ್ಯ ಸುಧಾರಿಸಲಿದೆ. ಶೇ.70ರಷ್ಟು ಹೃದಯ ಸಮಸ್ಯೆ ಇರುವವರು ಲಸಿಕೆ ಪಡೆಯಲಾಗಿದೆ ಎನ್ನಲಾಗಿದೆ. ಲಸಿಕೆ ಪಡೆಯದೇ ಇರುವವರು ಕೂಡಲೇ ಲಸಿಕೆ ಪಡೆದುಕೊಂಡರೆ, ಮೂರನೇ ಅಲೆಯಲ್ಲಿ ಆಗಬಹುದಾದ ಅನಾಹುತವನ್ನು ತಡೆಯಬಹುದು ಎಂದು ಡಾ.ಕೇಶವ್ ತಿಳಿಸಿದ್ದಾರೆ.
Advertisement