ವಿಶ್ವ ಮಧುಮೇಹ ದಿನ: ರೋಗಿಗಳಲ್ಲಿ ಕಣ್ಣಿನ ಸಮಸ್ಯೆ ಉಲ್ಬಣ; ಯುವಕರೂ ಹೊರತಲ್ಲ

ವರ್ಷದಿಂದ ವರ್ಷಕ್ಕೆ ಮಧುಮೇಹಿಗಳಲ್ಲಿ ಕಣ್ಣಿನ ಸಮಸ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬೆಳವಣಿಗೆಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಮಧುಮೇಹಿಗಳಲ್ಲಿ ಕಣ್ಣಿನ ಸಮಸ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬೆಳವಣಿಗೆಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ಹೆಲ್ತ್‌ಕೇರ್ ವೇದಿಕೆಗಳು ನಡೆಸಿದ ಸಮೀಕ್ಷೆ ಅಂಕಿಅಂಶಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಮಧುಮೇಹದ ಸಮಸ್ಯೆ ಶೇಕಡಾ 44 ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದ್ದು, ಈ ಪೈಕಿ ಬೆಂಗಳೂರು ಶೇಕಡಾ 29 ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ಇಂದು (ನವೆಂಬರ್ 14) ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಸ್ತುತ ಬೆಳವಣಿಗೆಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ನೇತ್ರತಜ್ಞ ಡಾ ರಾಕೇಶ್ ಸೀನಪ್ಪ ಅವರು ಮಾತನಾಡಿ, “ಮಧುಮೇಹದ ಹೆಚ್ಚಳದ ಶೇಕಡಾವಾರು ಕಳವಳಕ್ಕೆ ಒಂದು ದೊಡ್ಡ ಕಾರಣವಾಗಿದೆ. ಮಧುಮೇಹ ಕಣ್ಣಿನ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ. ಡಯಾಬಿಟಿಕ್ ರೆಟಿನೋಪತಿಯ ವಿರುದ್ಧ ಹೋರಾಡಲು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆ ಪ್ರಮುಖವಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾದಾಗ, ಅದು ನಿಮ್ಮ ಕಣ್ಣುಗಳ ಹಿಂಭಾಗದಲ್ಲಿರುವ ಸಣ್ಣ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ರೋಗಿಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲ ಮಧುಮೇಹ ಹೊಂದಿದ್ದರೆ, ಅವರು ಮಧುಮೇಹ ಕಣ್ಣಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಹೆಚ್ಚಿನ ರೋಗಿಗಳಿಗೆ ತಾವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ತಿಳಿದಿರುವುದೇ ಇಲ್ಲ. ಇನ್ನು ಕೆಲವರು ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡಿದ್ದರೆ, ಅದೇ ಔಷಧಿಗಳನ್ನೇ ವರ್ಷಾನುಗಟ್ಟಲೇ ಬಳಕೆ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಇದರಿಂದಲೂ ಸಮಸ್ಯೆ ಉಲ್ಭಣಗೊಳ್ಳುತ್ತದೆ ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ.

ಆರೋಗ್ಯ ರಕ್ಷಣಾ ವೇದಿಕೆಯಾದ ಪ್ರಾಕ್ಟೊ ನಡೆಸಿದ ಸಮೀಕ್ಷೆಯಲ್ಲಿ ಯುವಕರೂ ಕೂಡ ಹೆಚ್ಚು ಮಧುಮೇಹಿಗಳಾಗುತ್ತಿರುವುದು ಕಂಡು ಬಂದಿದೆ.

2021 ರಿಂದ ಯುವಜನರಲ್ಲಿ ಅಂದರೆ 25-34 ವಯಸ್ಸಿನ ಯುವಜನರಲ್ಲಿ ಮಧುಮೇಹವು ಶೇ. 46 ದಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ಕಳಪೆ ಜೀವನ ಶೈಲಿ, ವ್ಯಾಯಾಮದ ಕೊರತೆ ಹಾಗೂ ಆಹಾರ ಪದ್ಧತಿಗಳು ಇದಕ್ಕೆ ಕಾರಣವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ದೇಶದ ಒಟ್ಟಾರೆ ಮಧುಮೇಹಿಗಳ ಶೇಕವಡಾವಾರುಗಳಲ್ಲಿ ಬೆಂಗಳೂರಿನ ಪಾತ್ರ ಶೇ.29ರಷ್ಟಿದ್ದರೆ, ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ನಗರಗಳಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ.

ಮತ್ತೊಂದು ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ 1MG ನಡೆಸಿರುವ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲಿ ಹಿಮೋಗ್ಲೋಬಿನ್ A1C ರಕ್ತ ಪರೀಕ್ಷೆಗಾಗಿ ಪರೀಕ್ಷಿಸಲ್ಪಟ್ಟ 34 ಪ್ರತಿಶತದಷ್ಟು ಜನರಲ್ಲಿ ಮಧುಮೇಹ ಇರುವುದು ಕಂಡು ಬಂದಿದೆ.

ಪ್ರಾಕ್ಟೊದ ವೈದ್ಯಕೀಯ ಸಲಹೆಗಾರರಾದ ಡಾ.ಹೇಮಾ ವೆಂಕಟರಾಮನ್ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ಮಧುಮೇಹದ ಹೊರೆ ದ್ವಿಗುಣಗೊಂಡಿದೆ, ಆರೋಗ್ಯ ಮೂಲಸೌಕರ್ಯವು ಪ್ರಮಾಣಾನುಗುಣವಾಗಿ ಬೆಳೆದಿಲ್ಲ. ದೇಶದಲ್ಲಿ ಐವರ ಪೈಕಿ ಓರ್ವ ಯುವಕ ಮಧುಮೇಹ ಸಮಸ್ಯೆಗೆ ಒಳಗಾಗಿದ್ದಾನೆ. ಹೀಗಾಗಿ ಸಮರ್ಥನೀಯ ಮಧುಮೇಹ ಆರೈಕೆ ವಿತರಣೆಯನ್ನು ಪುನರ್ವಿಮರ್ಶಿಸುವ ಸಮಯವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com