ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳುವ ಡೇಂಜರ್ ಗ್ಲುಕೋಮಾ ಬಗ್ಗೆ ಎಷ್ಟು ಗೊತ್ತು?

ಇಂದಿನ ದಿನಗಳಲ್ಲಿ ಕಣ್ಣಿನ ಆರೋಗ್ಯ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ. ದಿನಪೂರ್ತಿ ಮೊಬೈಲ್‌, ಲ್ಯಾಪ್‌ ಟಾಪ್/‌ ಕಂಪ್ಯೂಟರ್‌ ವೀಕ್ಷಿಸುವುದರಿಂದ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಲ್ಯಾಪ್‌ ಟಾಪ್/‌ ಕಂಪ್ಯೂಟರ್‌ ಮೂಲಕ ಕೆಲಸ ಮಾಡುವುದು ಅನಿವಾರ್ಯವಾದ ಕಾರಣ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಂಪ್ಯೂಟರ್‌ ವೀಕ್ಷಿಸುವುದರಿಂದ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಲ್ಯಾಪ್‌ ಟಾಪ್/‌ ಕಂಪ್ಯೂಟರ್‌ ಮೂಲಕ ಕೆಲಸ ಮಾಡುವುದು ಅನಿವಾರ್ಯವಾದ ಕಾರಣ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

ವಯಸ್ಸಾದಂತೆ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿರುತ್ತದೆ. ಅಂತಹ ಸಮಸ್ಯೆಗೆಳಲ್ಲಿ ಗ್ಲುಕೋಮಾ ಕೂಡ ಒಂದು. ಆರಂಭದಲ್ಲಿ ಗ್ಲುಕೋಮಾ ಯಾವುದೇ ತರಹದ ರೋಗ ಲಕ್ಷಣಗಳನ್ನು ತೋರುವುದಿಲ್ಲ. ಸದ್ದಿಲ್ಲದೆ ತನ್ನ ಪಾಡಿಗೆ ತಾನು ಬೆಳವಣಿಗೆ ಆಗುತ್ತಿರುತ್ತದೆ. ವಯಸ್ಸಾಗುತ್ತಾ ಹೋದಂತೆ ಕಣ್ಣಿನೊಳಗಿನ ಹೆಚ್ಚಿದ ಒತ್ತಡವು ಆಪ್ಟಿಕ್ ನರದ ಅಂಗಾಂಶಕ್ಕೆ ಹಾನಿ ಮಾಡುತ್ತದೆ. ಇದರಿಂದ ದೃಷ್ಟಿ ದುರ್ಬಲವಾಗುತ್ತದೆ. ಹಾಗೆಯೇ ಕುರುಡುತನ ಉಂಟು ಮಾಡುತ್ತದೆ. ಇದರಿಂದ ದೂರ ಇರಬೇಕಾದರೆ ಆಗಾಗ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಇದಕ್ಕಿರುವ ಒಂದು ಉತ್ತಮ ಮಾರ್ಗ.

ವೈದ್ಯರು ರೋಗ ನಿರ್ಣಯ ಮಾಡುವ ಮೂಲಕ ಕಣ್ಣುಗಳ ನರಮಂಡಲಗಳ ಮೇಲೆ ಇರುವ ಒತ್ತಡ ಮತ್ತು ಕಣ್ಣುಗಳ ದೃಷ್ಟಿಗೆ ಸಂಬಂಧಪಟ್ಟಂತೆ ಪರೀಕ್ಷೆಗಳನ್ನು ಮಾಡುತ್ತಾರೆ. ಇದರಿಂದ ಗಂಭೀರವಾದ ದೃಷ್ಟಿ ಸಮಸ್ಯೆ ಎದುರಾಗುವ ಮುನ್ನವೇ ಸಮಸ್ಯೆಯನ್ನು ಸರಿಪಡಿಸುತ್ತಾರೆ. ಭಾರತದಲ್ಲಿ ಈ ಸಮಸ್ಯೆ 12 ಮಿಲಿಯನ್ ಜನರಲ್ಲಿ ಕಂಡುಬರುತ್ತಿದ್ದು, ಶೇ.90 ರಷ್ಟು ಗ್ಲುಕೋಮಾ ಸಮಸ್ಯೆಯು ಪತ್ತೆಯಾಗುವುದೇ ಇಲ್ಲ. ಇದರಿಂದಾಗಿ ಪ್ರತೀ ವರ್ಷ ಗ್ಲುಕೋಮಾದಿಂದ ದೃಷ್ಟಿ ಕಳೆದುಕೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ.

ಏನಿದು ಗ್ಲುಕೋಮಾ ಕಾಯಿಲೆ?

ಗ್ಲುಕೋಮಾ ಎಂಬುವುದು ಒಂದು ರೀತಿಯ ಕಣ್ಣಿನ ಕಾಯಿಲೆಯಾಗಿದ್ದು, ಈ ಸ್ಥಿತಿಯಲ್ಲಿ ಕಣ್ಣಿನ ದೃಷ್ಟಿನರ ನಿಧಾನವಾಗಿ ಘಾಸಿಗೊಳ್ಳುತ್ತಾ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಕಣ್ಣಿನ ಒಳಭಾಗದ ಒತ್ತಡ. ವಾಸ್ತವದಲ್ಲಿ, ಕಣ್ಣಿನ ಗುಡ್ಡೆಯ ಪಾತ್ರವೇನಿದ್ದರೂ ಎದುರಿನ ಬಿಂಬವನ್ನು ಕಣ್ಣುಗುಡ್ಡೆಯ ಒಳಬದಿಯ ಹಿಂಭಾಗದಲ್ಲಿ ಬೀಳುವಂತೆ ಮಾಡುವುದು.

ಇಲ್ಲಿರುವ ದೃಷ್ಟಿ ಸಂವೇದಕಗಳು ನೀಡುವ ಮಾಹಿತಿಯನ್ನು ದೃಷ್ಟಿನರ ಮೆದುಳಿಗೆ ತಲುಪಿಸುತ್ತದೆ ಹಾಗೂ ಮೆದುಳು ಈ ಮಾಹಿತಿಯನ್ನು ಬಿಂಬದಂತೆ ವಿಶ್ಲೇಷಿಸುತ್ತದೆ. ಆದ್ದರಿಂದ ಕಣ್ಣುಗುಡ್ಡೆಗಿಂತಲೂ ದೃಷ್ಟಿನರಕ್ಕೆ ಹೆಚ್ಚಿನ ಮಹತ್ವವಿದೆ. ಇತರ ಹಲವಾರು ಕಾಯಿಲೆಗಳಂತೆಯೇ ಗ್ಲುಕೋಮಾ ಸಹ ಪ್ರಾರಂಭಿಕ ಹಂತದಲ್ಲಿದ್ದಾಗ ಯಾವುದೇ ಗಮನಾರ್ಹ ಸೂಚನೆಯನ್ನು ನೀಡುವುದಿಲ್ಲ. ಈ ತೊಂದರೆ ಗಹನವಾಗಿದೆ ಎಂದು ಅನ್ನಿಸಿ ವೈದ್ಯರಲ್ಲಿ ಆಗಮಿಸಿದಾಗ ತಡವಾಗಿರುತ್ತದೆ ಮತ್ತು ಸರಿಪಡಿಸಲು ಸಾಧ್ಯವಾಗದಂತಹ ಹಂತವನ್ನು ದಾಟಿರುತ್ತದೆ.

ನಮ್ಮ ಕಣ್ಣುಗುಡ್ಡೆಗಳ ಒಳಭಾಗದಲ್ಲಿರುವ ದ್ರವ ಕೊಂಚ ಒತ್ತಡದಲ್ಲಿರುತ್ತದೆ. ಇದನ್ನು ಇಂಟ್ರಾಆಕ್ಯುಲಾರ್ ಪ್ರೆಶರ್ ಎಂದು ಕರೆಯಲಾಗುತ್ತದೆ. ಇದು 10 ರಿಂದ 20 mm Hgರಷ್ಟು ಒತ್ತಡದಲ್ಲಿರುತ್ತದೆ. ಯಾವಾಗ ಇದು 20 mm Hg ಒತ್ತಡವನ್ನು ದಾಟಿತೋ, ಆಗ ದೃಷ್ಟಿನರದ ಮೇಲೆ ಒತ್ತಡವನ್ನು ಹೇರಲು ಪ್ರಾರಂಭಿಸುತ್ತದೆ ಮತ್ತು ಕ್ರಮೇಣ ಅಂಧತ್ವ ಆವರಿಸುತ್ತಾ ಹೋಗುತ್ತದೆ. ಈ ಸ್ಥಿತಿ ಎದುರಾಗುವ ಸಾಧ್ಯತೆಗಳು ನಲವತ್ತನೆಯ ವಯಸ್ಸು ದಾಟಿದ ಬಳಿಕ ಪ್ರಾರಂಭವಾಗುತ್ತವೆ. ಇದರೊಂದಿಗೆ ಕುಟುಂಬದಲ್ಲಿ ಈ ತೊಂದರೆ ಇರುವ ಇತಿಹಾಸ, ಮಧುಮೇಹಿಯಾಗಿರುವುದು, ಅಧಿಕ ರಕ್ತದೊತ್ತಡ ಇರುವುದು ಹಾಗೂ ಧೂಮಪಾನಿಯಾಗಿರುವುದು ಈ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.

ಸಂಗ್ರಹ ಚಿತ್ರ
ಒತ್ತಡದ ಜೀವನ ನಿಮ್ಮ ಹಲ್ಲುಗಳ ಮೇಲೆ ಪರಿಣಾಮ ಬೀರಬಹುದು; ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಗ್ಲುಕೋಮಾದಲ್ಲಿ ಎರಡು ವಿಧ:

ಗ್ಲುಕೋಮಾದಲ್ಲಿ ಎರಡು ಮುಖ್ಯ ವಿಧಗಳಿವೆ. ಪ್ರೈಮರಿ ಓಪನ್ ಆಂಗಲ್ ಗ್ಲುಕೋಮಾ ಮತ್ತು ಪ್ರೈಮರಿ ಕ್ಲೋಸ್ಡ್ ಆಂಗಲ್ ಗ್ಲುಕೋಮಾ. ಕಣ್ಣಿಗೆ ಅಗತ್ಯವಾಗಿರುವ aqueous humor ಎಂಬ ದ್ರವದ ಉತ್ಪಾದನೆ ಮತ್ತು ಹರಿದುಹೋಗಿವಿಕೆಯಲ್ಲಿ ಇರುವ ಸಮತೋಲನವೇ ಇಂಟ್ರಾಆಕ್ಯುಲಾರ್ ಒತ್ತಡವನ್ನು ನಿಯಂತ್ರಿಸುತ್ತವೆ. ಈ ಸಮತೋಲನ ಅತಿ ಸೂಕ್ಷ್ಮವಾಗಿದೆ ಹಾಗೂ ಕೊಂಚವೇ ಈ ಸಮತೋಲನ ಅತ್ತಿತ್ತ ಆದರೂ ಇಂಟ್ರಾಆಕ್ಯುಲಾರ್ ಒತ್ತಡದಲ್ಲಿ ಏರುಪೇರಾಗುತ್ತದೆ. ಒತ್ತಡ ಹೆಚ್ಚಿದಷ್ಟೂ ಗ್ಲುಕೋಮಾ ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಕಣ್ಣುಗಳಲ್ಲಿ ಈ aqueous humor ದ್ರವದ ಉತ್ಪಾದನೆ ಮತ್ತು ಹರಿದುಹೋಗುವಿಕೆಯ ಪ್ರಮಾಣ ಅತಿ ನಿಖರವಾಗಿರಬೇಕು. ಅಂದರೆ ಈ ಸಮತೋಲನವೇ ನಮ್ಮ ಕಣ್ಣುಗಳ ಆರೋಗ್ಯವನ್ನು ನಿರ್ಧರಿಸುತ್ತವೆ.

ಗ್ಲುಕೋಮಾ ಪ್ರಾರಂಭವಾದಾದ ದೃಷ್ಟಿಯಲ್ಲಿ ಅತಿಹೆಚ್ಚು ಎನ್ನುವಂತಹ ಮಂಜೇನೂ ಆಗುವುದಿಲ್ಲ, ಆದರೂ ಮೆದುಳು ಈ ದೃಷ್ಟಿಯನ್ನೇ ಸಾಮಾನ್ಯ ಎಂದು ಪರಿಗಣಿಸಿಬಿಟ್ಟಿರುತ್ತದೆ. ಇದೇ ಕಾರಣಕ್ಕೆ ಗಂಭೀರವಾದ ಸ್ಥಿತಿಗೆ ಬರುವವರೆಗೂ ಈ ಸ್ಥಿತಿ ಸದ್ದಿಲ್ಲದೇ ಮುಂದುವರೆಯುತ್ತದೆ. ಹೀಗೇ ಮುಂದುವರೆಯುತ್ತಿದ್ದಂತೆ ದೃಷ್ಟಿನರದ ಮೇಲಿನ ಒತ್ತಡ ಅದರ ಆಕಾರ ಮತ್ತು ಕ್ಷಮತೆಯನ್ನೇ ಉಡುಗಿಸಿ ದೃಷ್ಟಿಯ ಕೋನವನ್ನೇ ಕಿರಿದಾಗಿಸುತ್ತಾ ಹೋಗುತ್ತದೆ. ಅಂದರೆ, ನಾವು ನೇರವಾಗಿ ನೋಡುವಾಗ ಕಣ್ಣುಗುಡ್ಡೆಯನ್ನು ಹೊರಳಿಸದೇ ಎಷ್ಟು ಕೋನ ಅಕ್ಕ ಪಕ್ಕ ನೋಡಲು ಸಾಧ್ಯವಾಗುತ್ತಿತ್ತೋ ಈಗ ಆ ಕೋನ ಕಡಿಮೆಯಾಗಿರುತ್ತದೆ. ಇದು ತೀರಾ ಹೆಚ್ಚಾಗಿ ನಟ್ಟ ನೇರ ಇರುವುದು ಮಾತ್ರವೇ ಕಾಣಿಸತೊಡಗಿ ಅದೂ ಮಂಜಾಗುತ್ತಾ ಹೋದಾಗ ಗ್ಲುಕೋಮಾ ಗಂಭೀರ ಮಟ್ಟಕ್ಕೆ ಬಂದಿರುವುದು ಗಮನಕ್ಕೆ ಬರುತ್ತದೆ. ಈ ನೋಟವನ್ನು ಟನೆಲ್ ವಿಶನ್ ಅಥವಾ ಕಾಲುವೆಯ ದೃಷ್ಟಿ ಎಂದು ಕರೆಯಲಾಗುತ್ತದೆ.​

ಗ್ಲುಕೋಮಾದ ಉಗ್ರರೂಪವಾದ ಟನೆಲ್ ವಿಶನ್ ತಲುಪಿದ ಬಳಿಕ ದೃಷ್ಟಿಯನ್ನು ಮತ್ತೊಮ್ಮೆ ಹಿಂದೆ ತರಲು ಸಾಧ್ಯವಿಲ್ಲ. ಆದ್ದರಿಂದ ನಿಯಮಿತವಾದ ಕಣ್ಣುಗಳ ಪರೀಕ್ಷೆಗೆ ಅತಿ ಹೆಚ್ಚಿನ ಮಹತ್ವವಿದೆ ಹಾಗೂ ಈ ಸ್ಥಿತಿ ಪ್ರಾರಂಭದ ಹಂತದಲ್ಲಿದ್ದಾಗಲೇ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಇದು ಉಲ್ಬಣಗೊಳ್ಳುವುದನ್ನು ತಡೆಯಬಹುದು ಹಾಗೂ ಅಂಧತ್ವದ ಪಡೆಯುವುದನ್ನು ತಪ್ಪಿಸಬಹುದು. ಇಂದು ಆಧುನಿಕ ಚಿಕಿತ್ಸೆಗಳು ಲಭ್ಯವಿದ್ದು ಪ್ರಾರಂಭಿಕ ಹಂತದಲ್ಲಿರುವ ಗ್ಲುಕೋಮಾವನ್ನು ತಡೆಗಟ್ಟಿ ಮೂಲ ದೃಷ್ಟಿಯನ್ನು ಆದಷ್ಟೂ ಮಟ್ಟಿಗೆ ಹಿಂದಕ್ಕೆ ಪಡೆಯಬಹುದು.

ಸಂಗ್ರಹ ಚಿತ್ರ
ಬಣ್ಣ ಬಣ್ಣದ ಆಹಾರ, ತರುವುದು ಆರೋಗ್ಯಕ್ಕೆ ಸಂಚಕಾರ: 'ರೊಡಮೈನ್ ಬಿ' ಬಗ್ಗೆ ಎಷ್ಟು ಗೊತ್ತು?

ಗ್ಲುಕೋಮಾಗೆ ಕಾರಣವೇನು?

ಕಣ್ಣಿನೊಳಗೆ aqueous humor ಎಂಬ ದ್ರವವಿದೆ. ಈ ದ್ರವವು ಕಣ್ಣಿನಲ್ಲಿರುವ ಜಾಲರಿಯಂತಹ ರಚನೆಯ ಮೂಲಕ ಹೊರಬರುತ್ತದೆ. ಆದರೆ, ಕೆಲವೊಮ್ಮೆ ಈ ದ್ರವವು ಹೊರಬರುವ ವಿಧಾನವು ನಿರ್ಬಂಧಿಸಲ್ಪಡುತ್ತದೆ. ಅಲ್ಲದೆ ಆ ದ್ರವವು ಕಣ್ಣುಗಳಲ್ಲಿ ಉಳಿಯುತ್ತದೆ. ಕೆಲವೊಮ್ಮೆ ತಜ್ಞರು ಈ ನಿರ್ಬಂಧದ ಕಾರಣವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಆದರೆ, ಇದು ಅನುವಂಶಿಕವಾಗಿರಬಹುದು.

ಇದರರ್ಥ ಇದು ಪೋಷಕರ ವಂಶವಾಹಿಗಳ ಮೂಲಕ ಮಕ್ಕಳಲ್ಲಿ ಉಂಟಾಗುವ ರೋಗವಾಗಿದೆ. ಇದರ ಜೊತೆಗೆ ಕಣ್ಣುಗಳಲ್ಲಿ ಉಂಟಾಗುವ ಒತ್ತಡ. ಮಧುಮೇಹ ಮತ್ತು ರಕ್ತದ ಒತ್ತಡ ದಂತಹ ಸಮಸ್ಯೆಗಳು ಮತ್ತೆ ಇವುಗಳಿಗೆ ಸಂಬಂಧಪಟ್ಟ ಔಷಧಿಗಳ ಅಡ್ಡ ಪರಿಣಾಮಗಳು, ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ಇವೆಲ್ಲವೂ ಕಾರಣವಾಗಿರುತ್ತವೆ. 40 ವರ್ಷ ಮೇಲ್ಪಟ್ಟವರಲ್ಲಿ, ಕುಟುಂಬದಲ್ಲಿ ಗ್ಲುಕೋಮಾ ಇತಿಹಾಸವಿದ್ದರೆ ಗ್ಲುಕೋಮಾದ ಅಪಾಯವು ಅಧಿಕವಾಗಿದೆ.

ರೋಗನಿರ್ಣಯ ಹೇಗೆ?

  • ವೈದ್ಯಕೀಯ ಇತಿಹಾಸ

  • ಸಮಗ್ರ ಕಣ್ಣಿನ ಪರೀಕ್ಷೆ

  • ಇಂಟ್ರಾಕ್ಯುಲರ್ ಒತ್ತಡವನ್ನು ಅಳೆಯುವುದು (ಟೋನೊಮೆಟ್ರಿ)

  • ಆಪ್ಟಿಕ್ ನರ ಹಾನಿ ಪರೀಕ್ಷೆ

  • ಕಾರ್ನಿಯಲ್ ದಪ್ಪವನ್ನು ಪರೀಕ್ಷೆ (ಪ್ಯಾಕಿಮೆಟ್ರಿ) ನಡೆಸುವುದು.

  • ಗೊನಿಯೊಸ್ಕೋಪಿ

ಚಿಕಿತ್ಸೆ ಹೇಗೆ?

ಗ್ಲುಕೋಮಾ ರೋಗ ತೀವ್ರ ಹಂತಕ್ಕೆ ಹೋದಲ್ಲಿ ದೃಷ್ಟಿಯನ್ನು ಮರುತರಲು ಸಾಧ್ಯವಿಲ್ಲ. ಆದರೆ, ನಿಯಮಿತ ಕಣ್ಣಿನ ಪರೀಕ್ಷೆಯಿಂದ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದರಿಂದ ಕಣ್ಣಿಗೆ ಆಗುವ ಹಾನಿಯನ್ನು ಸರಿಪಡಿಸಬಹುದು.

ಸಾಮಾನ್ಯವಾಗಿ ಈ ಸಮಸ್ಯೆಗೆ ವೈದ್ಯರು ಕಣ್ಣಿನ ಡ್ರಾಪ್ಸ್ ಹಾಕಿ ಕೊಳ್ಳುವ ಸಲಹೆ ನೀಡುತ್ತಾರೆ. ಇದರ ಜೊತೆಗೆ ಕಣ್ಣಿನಲ್ಲಿ ಉತ್ಪತ್ತಿ ಯಾಗುವ ನೀರಿನ ಅಂಶದ ಪ್ರಮಾಣವನ್ನು ಕಡಿಮೆಯಾಗುವಂತೆ ಮಾಡುತ್ತಾರೆ.

ಸಂಗ್ರಹ ಚಿತ್ರ
ಪ್ರತಿದಿನ ಕಿವಿ ಶುಚಿಗೊಳಿಸುವ ಅಗತ್ಯ ಇದೆಯೇ? ಈ ಬಗ್ಗೆ ತಜ್ಞರ ಸಲಹೆಯೇನು?

ಕಣ್ಣುಗಳ ಭಾಗದಿಂದ ಹೆಚ್ಚುವರಿ ನೀರಿನ ಅಂಶ ಹರಿದು ಹೋಗುವ ಸಾಧ್ಯತೆಯನ್ನು ಲೇಸರ್ ಚಿಕಿತ್ಸೆಯ ಮೂಲಕವೂ ಕಡಿಮೆ ಮಾಡಲಾಗುತ್ತದೆ. ಇದು ಕಣ್ಣು ಗಳ ಒಳಭಾಗದಲ್ಲಿ ಇರುವ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಕಣ್ಣುಗಳಿಗೆ ನೀರು ತುಂಬಿಕೊಳ್ಳುವ ತೊಂದರೆ ಹೆಚ್ಚಾಗಿದ್ದರೆ ಮತ್ತು ಕಣ್ಣುಗಳಿಂದ ಏನನ್ನು ಸಹ ನೋಡಲಾಗುತ್ತಿಲ್ಲ ಎಂದರೆ ಅಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಅವಶ್ಯಕತೆ ಇರುತ್ತದೆ. ಹೀಗೆ ಮಾಡಿ ಕಣ್ಣುಗಳಿಂದ ಹೆಚ್ಚುವರಿ ನೀರು ಬೇರೆ ಕಡೆ ಹೋಗುವಂತೆ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com