ಸಂಚಾರ ನಿಯಮ ಉಲ್ಲಂಘಿಸಿದರೆ ಮನೆ ಬಾಗಿಲಿಗೇ ನೋಟಿಸ್!

ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸ್ ಇಲ್ಲ ಎಂದು ಸಂಚಾರ ನಿಯಮ ಉಲ್ಲಂಘನೆ ಮಾಡುವ, ಹೆಲ್ಮೆಟ್ ಹಾಕದೆ ಪೊಲೀಸರ ಕಣ್ಣು ತಪ್ಪಿಸಿ ಅಡ್ಡದಿಡ್ಡಿ ರಸ್ತೆಗಳಲ್ಲಿ ಚಾಲನೆ ಮಾಡುವ, 3-4 ಮಂದಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಸ್ಟೈಲ್ ಆಗಿ ಹೋಗುವ ಬೈಕ್ ಸವಾರರನ್ನು...
ಬೆಂಗಳೂರು ಸಂಚಾರಿ ಪೊಲೀಸ್ (ಸಂಗ್ರಹ ಚಿತ್ರ)
ಬೆಂಗಳೂರು ಸಂಚಾರಿ ಪೊಲೀಸ್ (ಸಂಗ್ರಹ ಚಿತ್ರ)

ಬೆಂಗಳೂರು: ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸ್ ಇಲ್ಲ ಎಂದು ಸಂಚಾರ ನಿಯಮ ಉಲ್ಲಂಘನೆ ಮಾಡುವ, ಹೆಲ್ಮೆಟ್ ಹಾಕದೆ ಪೊಲೀಸರ ಕಣ್ಣು ತಪ್ಪಿಸಿ ಅಡ್ಡದಿಡ್ಡಿ ರಸ್ತೆಗಳಲ್ಲಿ ಚಾಲನೆ ಮಾಡುವ, 3-4 ಮಂದಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಸ್ಟೈಲ್ ಆಗಿ ಹೋಗುವ ಬೈಕ್ ಸವಾರರನ್ನು ಇನ್ನು ಮುಂದೆ ಟ್ರಾಫಿಕ್ ಪೊಲೀಸರು ತಡೆಯುವುದಿಲ್ಲ. ದಂಡ ಕಟ್ಟಿಸಿಕೊಟ್ಟಿಸಿಕೊಳ್ಳುವುದಿಲ್ಲ. ಬದಲಾಗಿ ನಿಮ್ಮ ಮನೆಯ ಬಾಗಿಲಿಗೆ ಇನ್ನು ಮುಂದೆ ನೋಟಿಸ್ ಜಾರಿ ಮಾಡಲಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಇತ್ತೀಚಿನ ದಿನಗಳಲ್ಲಿ ತಲೆನೋವಾಗಿ ಪರಿಣಮಿಸಿದ್ದು, ಇದೀಗ ನಗರ ಪೊಲೀಸರು ಹೊಸ ನಿಯಮವನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಸವಾರರನ್ನು ಪೊಲೀಸರು ರಸ್ತೆ ಮಧ್ಯೆ ಅಡ್ಡಗಟ್ಟಿ ದಂಡ ಹಾಕುವುದಿಲ್ಲ. ಬದಲಾಗಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ಬರೆದುಕೊಂಡು ಮನೆ ವಿಳಾಸಕ್ಕೆ ನೇರವಾಗಿ ನೋಟಿಸ್ ಜಾರಿ ಮಾಡಲಿದ್ದಾರೆ.

ಇಷ್ಟು ದಿನ ಪೊಲೀಸರು ವಾಹನ ತಡೆಹಿಡಿಯುತ್ತಿದ್ದಂತೆ ಸವಾರರು ಸ್ಥಳದಲ್ಲಿಯೇ ದಂಡ ಕಟ್ಟಿ ಹೋಗುತ್ತಿದ್ದರು. ಆದರೆ, ಇದೀಗ ಜಾರಿಯಾಗಲಿರುವ ಹೊಸ ನಿಯಮದಲ್ಲಿ ಯಾವುದೇ ಕೇಂದ್ರಗಳಲ್ಲಿ ಬೇಕಾದರೂ ದಂಡ ಕಟ್ಟುವಂತಿಲ್ಲ. ಬದಲಾಗಿ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಹೋಗಿ ದಂಡ ಕಟ್ಟಬೇಕಾಗಿದೆ.

ಹೊಸ ನಿಯಮ ಕುರಿತಂತೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಅವರು, ರಸ್ತೆ ಮಧ್ಯೆ ಪೊಲೀಸರು ಹಾಗೂ ಸಾರ್ವಜನಿಕ ಮಧ್ಯೆ ಆಗುವ ವಾಗ್ವಾದಗಳನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯೆಯಿರುವ ಸಂಬಂಧವನ್ನು ಮೃದುವಾಗಿಸಲು ಈ ನಿಯಮ ಸಹಕಾರಿಯಾಗಿದೆ. ನಿಯಮವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಧೀರ್ಘಾಕಾಲಿಕ ಸಮಯ ಬೇಕಾಯಿತು. ಇದೀಗ ನಿಯಮ ಜಾರಿ ಮಾಡಲಾಗಿದೆ. ಬುಧವಾರದಿಂದ ಹೊಸ ನಿಯಮ ಜಾರಿಯಾಗಿದ್ದು, 1 ವಾರಗಳ ಕಾಲ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬರು ಹಿರಿಯ ಪೊಲೀಸರು ಮಾತನಾಡಿ, ಸಂಚಾರ ನಿಯಮ ಉಲ್ಲಂಘನೆಯಿಂದಲೇ ವರ್ಷಕ್ಕೆ 50 ರಿಂದ 70 ಕೋಟಿ ಹಣವನ್ನು ಸಂಗ್ರಹಿಸಲಾಗುತ್ತಿದೆ. ಹೀಗಾಗಿ ನಿಯಮ ಉಲ್ಲಂಘನೆಯನ್ನು ತಡೆಗಟ್ಟಲು ಸವಾರರು ನೇರವಾಗಿ ಕೇಂದ್ರಕ್ಕೆ ಬಂದು ಹಣಕಟ್ಟುವಂತೆ ಮಾಡಲಾಗಿದೆ. ಇನ್ನು ಸಂಚಾರ ನಿಯಮ ಉಲ್ಲಂಘಿಸಿದ ನಂತರ ಕೆಲವರು ಪೊಲೀಸರಿಗೆ ಪ್ರಮುಖ ವ್ಯಕ್ತಿಗಳಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ರಸ್ತೆಗಳಲ್ಲೇ ವಾಗ್ವಾದ, ಕೂಗಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಇಂತಹ ಪ್ರಕರಣಗಳಿಗೆ ಹೊಸ ನಿಯಮದಿಂದ ಬ್ರೇಕ್ ಬೀಳಲಿದೆ ಎಂದು ಹೇಳಿದ್ದಾರೆ.

ಉಪ ಪೊಲೀಸ್ ಆಯುಕ್ತ (ಸಂಚಾರ ಪಶ್ಚಿಮ) ಎಸ್ ಗಿರೀಶ್ ಮಾತನಾಡಿ, ಪೊಲೀಸರು ತಡೆಯುವುದಿಲ್ಲ ಎಂಬ ಕಾರಣಕ್ಕೆ ಕೆಲವರು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡುತ್ತಾರೆ. ಆದರೆ, ಇದು ತಪ್ಪು ಕಲ್ಪನೆ. ತಡೆಹಿಡಿಯುವ ಬದಲು ಇನ್ನು ಮುಂದೆ ನೇರವಾಗಿ ಮನೆಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಜಾರಿಯಾಗಲಿರುವ ಸಂಪರ್ಕರಹಿತ ಪೊಲೀಸ್ ಪರಿಕಲ್ಪನೆಯನ್ನು ಜಾರಿಗೆ ತರಲು ಈ ಹಿಂದಿನಿಂದಲೂ ಚಿಂತನೆ ನಡೆಸಲಾಗಿತ್ತು.

ಹೊಸ ನಿಯಮ ಜಾರಿ ಬುಧವಾರದಿಂದಲೇ ಆರಂಭವಾಗಿದ್ದು, ಪಶ್ಚಿಮ ವಲಯದಲ್ಲೇ ಈ ವರೆಗೂ ಸುಮಾರು 30 ಸಾವಿರಕ್ಕೂ ಅಧಿಕ ಪ್ರಕರಣಗಳು ಪ್ರಾದೇಶಿಕ ಸಂಚಾರ ಉಲ್ಲಂಘನೆ ವರದಿಗಳು (ಎಫ್'ಟಿವಿಆರ್) ದಾಖಲಾಗಿವೆ. ಕೇವಲ ಒಂದೇ ದಿನದಲ್ಲಿ ಇಷ್ಟು ಪ್ರಕರಣಗಳು ದಾಖಲಾಗಿರುವ ಇದೇ ಮೊದಲು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com