ಪ್ರತಿಭಟನೆ ಬಳಿಕ ಮೌಲ್ಯ ಮಾಪನಕ್ಕೆ ಹಾಜರಾದ ಶಿಕ್ಷಕರು
ಪ್ರತಿಭಟನೆ ಬಳಿಕ ಮೌಲ್ಯ ಮಾಪನಕ್ಕೆ ಹಾಜರಾದ ಶಿಕ್ಷಕರು

ಸರ್ಕಾರ ನಮ್ಮೊಂದಿಗಿದೆ ಎಂದು ನಂಬಿದ್ದ ಶಿಕ್ಷಕರಿಗೆ ಭ್ರಮನಿರಸನ!

ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂಬ ಶಪಥದೊಂದಿಗೆ ಮುಷ್ಕರ ಆರಂಭಿಸಿದ್ದ ಶಿಕ್ಷಕರಿಗೆ ನಿಜಕ್ಕೂ ಇದೀಗ ಭ್ರಮನಿರಸನವಾಗಿದ್ದು, ಸರ್ಕಾರದ ಒಂದು ವೇತನ ಭಡ್ತಿ ಕ್ರಮ ಆಘಾತ ನೀಡಿದೆ...

ಬೆಂಗಳೂರು: ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂಬ ಶಪಥದೊಂದಿಗೆ ಮುಷ್ಕರ ಆರಂಭಿಸಿದ್ದ ಶಿಕ್ಷಕರಿಗೆ ನಿಜಕ್ಕೂ ಇದೀಗ  ಭ್ರಮನಿರಸನವಾಗಿದ್ದು, ಸರ್ಕಾರದ ಒಂದು ವೇತನ ಭಡ್ತಿ ಕ್ರಮ ಆಘಾತ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯಸ್ಥಿಕೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ಬಳಿಕ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುತ್ತಿದ್ದೇವೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಘೋಷಿಸಿದರು. ಆದರೆ ಸರ್ಕಾರದ ಕ್ರಮವನ್ನು ಖಂಡಿಸಿರುವ ಶಿಕ್ಷಕರು ‘ಸರ್ಕಾರದ  ಒಂದು ವೇತನ ಬಡ್ತಿಯ ಭಿಕ್ಷೆ ನಮಗೆ ಬೇಕಿಲ್ಲ, ಅದನ್ನೂ ಸರ್ಕಾರವೇ ಇರಿಸಿಕೊಳ್ಳಲಿ’ ಎಂದು ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಸರ್ಕಾರ ಕೂಡ ತನ್ನ ನಿರ್ಧಾರ ಮೇಲೆ ಬಿಗಿಪಟ್ಟು ಹಿಡಿದಿದ್ದು, 6ನೇ ವೇತನ ಆಯೋಗದಲ್ಲಿ ಉಪನ್ಯಾಸಕರಿಗೆ ವೇತನದಲ್ಲಿ ವ್ಯತ್ಯಾಸ ಆಗಿದ್ದರಿಂದ ಮಾಸಿಕ ರು.500 ವಿಶೇಷ ಭತ್ಯೆಯನ್ನು  ಸರ್ಕಾರ ನೀಡುತ್ತಿದೆ. ಈಗ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾರಣ,  ಒಂದು ವೇತನ ಬಡ್ತಿ (ವೇತನ ಶ್ರೇಣಿ ಆಧಾರದ ಮೇಲೆ ರು.700ರಿಂದ 900ವರೆಗೆ ಮೂಲ ವೇತನಕ್ಕೆ  ಸೇರ್ಪಡೆ) ಜೊತೆಗೆ ವಿಶೇಷ ಭತ್ಯೆ ಮುಂದುವರಿಸುವುದಾಗಿ ಹೇಳಿತ್ತು. ಆದರೆ ಸರ್ಕಾರದ ಈ ಕ್ರಮವನ್ನು ಉಪನ್ಯಾಸಕರು ಒಪ್ಪಿರಲಿಲ್ಲ. ವರದಿಯನ್ನು ಪೂರ್ಣವಾಗಿ ಜಾರಿಗೆ ತರಬೇಕು ಎಂದು  ಶಿಕ್ಷಕರು ಮುಷ್ಕರ ಆರಂಭಿಸಿದ್ದರು.

‘ಕುಮಾರ ನಾಯಕ್‌ ವರದಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದಕ್ಕಾಗಿ ಮೊದಲಿನಿಂದಲೂ ಹೋರಾಟ ಮಾಡುತ್ತಾ ಬಂದರೂ  ಸರ್ಕಾರ ಸ್ಪಂಧಿಸುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಮೌಲ್ಯಮಾಪನ ಬಹಿಷ್ಕರಿಸಬೇಕಾಯಿತು. ಈಗ ಸರ್ಕಾರ ಒಂದು ವೇತನ ಬಡ್ತಿ ನೀಡುವುದಾಗಿ ಹೇಳಿದೆ.  ಸರ್ಕಾರ ಭಿಕ್ಷೆಯ ರೂಪದಲ್ಲಿ  ನೀಡಿರುವ ವೇತನ ಬಡ್ತಿಯನ್ನು ಸರ್ಕಾರಕ್ಕೇ ಮರಳಿಸುತ್ತೇವೆ. ಈ ಸಂಬಂಧ ಸರ್ಕಾರಕ್ಕೆ ಪತ್ರದ ಮೂಲಕವೂ ತಿಳಿಸುತ್ತೇವೆ’ ಎಂದು ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ  ಪುರ್ಲೆ ಹೇಳಿದರು.

‘ಏ. 3ರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. 7 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದೇವೆ. ಇನ್ನೂ ಹೋರಾಟ ಮುಂದುವರಿಸಿದರೆ ಉಪನ್ಯಾಸಕ ವೃತ್ತಿಗೆ ಗೌರವ ತರುವುದಿಲ್ಲ ಎಂಬ  ಕಾರಣಕ್ಕೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ. ಆದರೆ, ಬೇಡಿಕೆ ಈಡೇರುವವರೆಗೆ ಹೋರಾಟ ನಿರಂತರವಾಗಿರುತ್ತದೆ’ ಎಂದು ಪುರ್ಲೆ ಸ್ಪಷ್ಟಪಡಿಸಿದರು.

ಉಪನ್ಯಾಸಕರ ಕಣ್ಣೀರು!

ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂಬ ಶಪಥದೊಂದಿಗೆ ಮುಷ್ಕರ ಆರಂಭಿಸಿದ್ದ ಶಿಕ್ಷಕರಿಗೆ ನಿಜಕ್ಕೂ ಇದೀಗ ಭ್ರಮನಿರಸನವಾಗಿದ್ದು,  ಸರ್ಕಾರದ ಒಂದು ವೇತನ ಭಡ್ತಿ ಕ್ರಮ ಆಘಾತ ನೀಡಿದೆ. ಸರ್ಕಾರ ಈ ಕ್ರಮದಿಂದಾಗಿ ಬಹುತೇಕ ಉಪನ್ಯಾಸಕರು ಹತಾಶಗೊಂಡಿದ್ದರು. ಇದೇ ನಿರ್ಧಾರ ಅಂತಿಮ ಎಂದು ಗೊತ್ತಾದಾಗ  ಪ್ರತಿಭಟನಾ ನಿರತ ಉಪನ್ಯಾಸಕರು ಮಂಗಳವಾರ ಕಣ್ಣೀರಿಡುವು ಮೂಲಕ ಸರ್ಕಾರಕ್ಕೆ ಶಾಪ ಹಾಕಿಕೊಂಡು ಪ್ರತಿಭಟನೆ ಹಿಂಪಡೆಯುವ ನಿರ್ಧಾರ ಮಾಡಿದರು. ಉಪನ್ಯಾಸಕರ ಸಂಘದ  ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ ಅವರು ಕಣ್ಣೀರಿಡುತ್ತಲೇ ನಿರ್ಧಾರ ಪ್ರಕಟಿಸಿದರು.

ಸರ್ಕಾರದ ವಿರುದ್ಧ ಘೋಷಣೆ
ಸಚಿವ ಕಿಮ್ಮನೆ ರತ್ನಾಕರ ಅವರು ಸಂಜೆ ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಸರ್ಕಾರದ ಅಂತಿಮ ನಿರ್ಧಾರದ ಬಗ್ಗೆ ತಿಳಿಸಿದರು. ಅಲ್ಲದೆ, ಮೌಲ್ಯಮಾಪನಕ್ಕೆ  ಹಾಜರಾಗದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದರು. ಇದರಿಂದ ಅಸಮಾಧಾನಗೊಂಡ ಉಪನ್ಯಾಸಕರು, ‘ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇವೆ.  ನಾವು ಭಿಕ್ಷೆ ಕೇಳುತ್ತಿಲ್ಲ. ವೇತನ ಆಯೋಗದ ಪ್ರಕಾರ ನಮಗೆ ಏನು ಸಿಗಬೇಕೋ ಅದನ್ನು ಮಾತ್ರ ಕೇಳುತ್ತಿದ್ದೇವೆ. ಉಪನ್ಯಾಸಕರ ಬೇಡಿಕೆ ಬಗ್ಗೆ ಸರ್ಕಾರ ಕಡೆಗಣಿಸಿರುವುದು ಖಂಡನೀಯ’  ಎಂದು ಧಿಕ್ಕಾರ ಕೂಗಿದರು. ಈ ಗಲಾಟೆಯ ಮಧ್ಯೆಯೇ ಕಿಮ್ಮನೆ ಸ್ಥಳದಿಂದ ನಿರ್ಗಮಿಸಿದರು.

ಸಿದ್ದರಾಮಯ್ಯ ಸಭೆ: ಉಪನ್ಯಾಸಕರ ಬೇಡಿಕೆ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ  ಮಾಡಿ ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು "ಒಂದು ವೇತನ ಬಡ್ತಿ ಹಾಗೂ ವಿಶೇಷ ಭತ್ಯೆ ನೀಡುವ ಸರ್ಕಾರದ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಪ್ರತಿಭಟನೆ  ಹಿಂಪಡೆದು ಮೌಲ್ಯಮಾಪನಕ್ಕೆ ಹಾಜರಾಗಲಿ. ಮೌಲ್ಯಮಾಪನದ ಬಳಿಕ ಉಪನ್ಯಾಸಕರ ಬೇಡಿಕೆ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com