ಪಲ್ಟಿ ಹೊಡೆದ ಗ್ಯಾಸ್ ಟ್ಯಾಂಕರ್: 50 ಮನೆಗಳ ಜನರ ಸ್ಥಳಾಂತರ

ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ವೊಂದು ಉರುಳಿ ಬಿದ್ದಿರುವ ಘಟನೆಯೊಂದು ಬಂಟ್ವಾಳ ಸಾಮೀಪದ ಸೂರಿ ಕೊಮೇರಿ ಎಂಬಲ್ಲಿ ಸೋಮವಾರ...
ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿ ಶಾಮಕ ದಳದ ಸಿಬ್ಬಂದಿಗಳು
ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿ ಶಾಮಕ ದಳದ ಸಿಬ್ಬಂದಿಗಳು

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ವೊಂದು ಉರುಳಿ ಬಿದ್ದಿರುವ ಘಟನೆಯೊಂದು ಬಂಟ್ವಾಳ ಸಾಮೀಪದ ಸೂರಿ ಕೊಮೇರಿ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ 12 ಗಂಟೆಗೂ ಅಧಿಕ ಸಮಯ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಸೋಮವಾರ ರಾತ್ರಿ ಟೋಟಲ್ ಅನಿಲ ಕಂಪನಿಯ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ತುಂಬಿಕೊಂಡು ಸಾಗುತ್ತಿತ್ತು. ರಾತ್ರಿ 11.30ರ ವೇಳೆಗೆ ಬಂಟ್ವಾಳ ತಾಲೂಕಿನ ಸೂರಿಕೊಮೇರಿಯ ಅಪಾಯಕಾರಿ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದ ಟ್ಯಾಂಕರ್ ಇದ್ದಕ್ಕಿದ್ದಂತೆ ರಸ್ತೆಗೆ ಉರುಳಿದೆ. ಈ ವೇಳೆ ಟ್ಯಾಂಕರ್ ಎರಡೂ ಮುಚ್ಚಳಗಳು ತೆರೆದುಕೊಂಡಿದೆ. ಪರಿಣಾಮ ಸ್ಥಳದಲ್ಲಿ ಅನಿಲ ಸೋರಿಯಾಗಿದೆ. ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದರಂತೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿದ್ದ 50ಕ್ಕೂ ಹೆಚ್ಚು ಮನೆಗಳ ಜನರನ್ನು ಸ್ಥಳಾಂತರಿಸಿದ್ದಾರೆ. ಅಲ್ಲದೆ, ಪುತ್ತೂರು, ಬೆಳ್ತಂಗಡಿ, ಮಂಗಳೂರು, ಕಾದ್ರಿ, ಪಾಂಡೇಶ್ವರದ 50ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ. ಸೋಮವಾರ ರಾತ್ರಿ ಪಲ್ಟಿ ಹೊಡೆದ ಟ್ಯಾಂಕರ್ ನಿಂದ ಸೋರಿಕೆಯಾದ ಅನಿಲ ಮಂಗಳವಾರ ಬೆಳಿಗ್ಗೆವರೆಗೂ ಸೋರಿಕೆಯಾಗಿದೆ.

ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿಯನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು. ಪುತ್ತೂರಿನಿಂದ ಮಂಗಳೂರಿಗೆ ಬರುವ ಎಲ್ಲಾ ವಾಹನಗಳನ್ನು ಹಾಗೂ ಕಲ್ಲಡ್ಕದಿಂದ ವೀರಕ್ಮ್ಭ, ಅನಂತಡಿ, ಕೊಡಜೆ ಮಾರ್ಗವಾಗಿ ಬರುವ ವಾಹನಗಳನ್ನು ತಡೆಹಿಡಲಾಗಿತ್ತು. ಮಂಗಳೂರು ಮಾರ್ಗವಾಗಿ ಬರುವ ವಾಹನಗಳಿಗೆ ವಿಟ್ಟಲ್ ಮಾರ್ಗವಾಗಿ ಬರುವಂತೆ ಸೂಚನೆ ನೀಡಲಾಗಿತ್ತು. ಇನ್ನು ಉಪ್ಪಿನಂಗಡಿಯಿಂದ ಬರುವ ವಾಹನಗಳಿಗೆ ಅನಂತಡಿ ಮೂಲಕವಾಗಿ ಹೋಗುವಂತೆ ತಿಳಿಸಲಾಗಿತ್ತು. ಈ ಎಲ್ಲಾ ಸಂಚಾರ ವ್ಯತ್ಯಯ ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೂ ಮುಂದುವರೆದಿತ್ತು. ನಂತರ ಕಾರ್ಯಾಚರಣೆ ನಡೆಸಿದ ಬಳಿಕ ಎಂದಿನಂತೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com