ಬೆಂಗಳೂರಿನಲ್ಲಿ ಮುನ್ಸೂಚನೆ ಇಲ್ಲದೇ ವಿದ್ಯುತ್ ಕಟ್ (ಸಾಂದರ್ಭಿಕ ಚಿತ್ರ)
ಬೆಂಗಳೂರಿನಲ್ಲಿ ಮುನ್ಸೂಚನೆ ಇಲ್ಲದೇ ವಿದ್ಯುತ್ ಕಟ್ (ಸಾಂದರ್ಭಿಕ ಚಿತ್ರ)

ನೀರಿಲ್ಲ, ವಿದ್ಯುತ್ ಇಲ್ಲ; ಬೆವರುತ್ತಿದೆ ಬೆಂಗಳೂರು!

ರಣ ಬಿಸಿಲಿಗೆ ಒಂದೆಡೆ ಜನ ತತ್ತರಿಸಿ ಹೋಗಿದ್ದರೆ, ನೀರಿಲ್ಲದೆ ವಿದ್ಯುತ್ ತಯಾರಿಸಲಾಗದೇ ರಾಜ್ಯ ಇಂಧನ ಇಲಾಖೆ ಕಂಗಾಲಾಗಿ ಕೂತಿದೆ...

ಬೆಂಗಳೂರು: ರಣ ಬಿಸಿಲಿಗೆ ಒಂದೆಡೆ ಜನ ತತ್ತರಿಸಿ ಹೋಗಿದ್ದರೆ, ನೀರಿಲ್ಲದೆ ವಿದ್ಯುತ್ ತಯಾರಿಸಲಾಗದೇ ರಾಜ್ಯ ಇಂಧನ ಇಲಾಖೆ ಕಂಗಾಲಾಗಿ ಕೂತಿದೆ.

ರಾಜ್ಯದಲ್ಲಿ ಈ ಭಾರಿ ಆವರಿಸಿರುವ ಭೀಕರ ಜಲಕ್ಷಾಮದಿಂದಾಗಿ ಉದ್ಯಾನನಗರಿ ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿದ್ದು, ಬೆಂಗಳೂರಿನ ಹಲವೆಡೆ ದಿನಗಟ್ಟಲೇ ಮುನ್ಸೂಚನೆ  ಇಲ್ಲದೇ ವಿದ್ಯುತ್ ಪ್ರಸರಣವನ್ನು ಕಡಿತಗೊಳಿಸಲಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಮುಂದಿನ ಒಂದು ತಿಂಗಳವರೆಗೆ ಮಾತ್ರ ಜಲ ವಿದ್ಯುತ್‌  ಉತ್ಪಾದಿಸಬಹುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದರಿಂದ ಈಗಾಗಲೇ ಉಷ್ಣವಿದ್ಯುತ್‌ ಘಟಕಗಳೂ ತೊಂದರೆ ಅನುಭವಿಸುತ್ತಿವೆ’  ಎಂದು ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಪ್ರತಿದಿನ 2400–2500 ಮೆಗಾವಾಟ್‌ ವಿದ್ಯುತ್‌ ಅವಶ್ಯಕತೆ ಇದ್ದು, ಇದು ರಾಜ್ಯದ ವಿದ್ಯುತ್‌ ಉತ್ಪಾದನೆಯ ಶೇ 49 ರಷ್ಟು ಆಗುತ್ತದೆ. ಬೇಸಿಗೆ ಕಾಲದಲ್ಲಿ ಬೆಂಗಳೂರಿಗೆ 2400-2500 ಮೆಗಾ ವ್ಯಾಟ್ ವಿದ್ಯುತ್ ಅವಶ್ಯಕತೆ ಇದ್ದು, ಬೇಸಿಗೆಯನ್ನು ಹೊರತು ಪಡಿಸದರೆ 2100 ಮೆಗಾವ್ಯಾಚ್ ವಿದ್ಯುತ್ ಸಾಕು. ನೀರಿನ ಕೊರತೆಯಿಂದಾಗಿ ಬೇಡಿಕೆ ಮತ್ತು ಉತ್ಪನ್ನದ  ಮಧ್ಯೆ ಇರುವ ಅಂತರವನ್ನು ನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇಲಾಖೆಯ ಅಧಿಕಾರಿಗಳ ಪ್ರಕಾರ ಮುಂದಿನ 20 ದಿನಗಳಲ್ಲಿ ಜಲ ವಿದ್ಯುತ್‌ ಉತ್ಪಾದನೆ ನಿಲ್ಲಿಸಬೇಕಾಗುವ ಪರಿಸ್ಥಿತಿ ಬರಬಹುದು. ಸದ್ಯ ಲಿಂಗನಮಕ್ಕಿ ಜಲ ವಿದ್ಯುದಾಗಾರದಲ್ಲಿ 1,200 ಮೆಗಾವಾಟ್‌ ಮತ್ತು ಶರಾವತಿ ಜಲ ವಿದ್ಯುದಾಗಾರದಲ್ಲಿ 1,000 ಮೆಗಾವಾಟ್‌  ಉತ್ಪಾದಿಸಲಾಗುತ್ತದೆ. ಇವು ಸ್ಥಗಿತಗೊಂಡರೆ ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗದಲ್ಲಿಯೂ ವಿದ್ಯುತ್‌ ಕೊರತೆಯಾಗುತ್ತದೆ. ಇದರಿಂದ ಪಾರಾಗಲು ಮಳೆಯೊಂದೇ ಪರಿಹಾರ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಸಾಕಷ್ಟು ಪೂರೈಕೆ ಮಾಡಲಾಗುತ್ತಿದೆ ಎಂದ ಇಂಧನ ಇಲಾಖೆ
ಅತ್ತ ಅಧಿಕಾರಿಗಳು ಜಲ ವಿದ್ಯುದಾಗಾರಗಳಲ್ಲಿ ನೀರಿನ ಅಭಾವವಿರುವುದರಿಂದ ವಿದ್ಯುತ್ ಕೊರೆತೆಯುಂಟಾಗುತ್ತಿದೆ ಎಂದು ಹೇಳಿದರೆ, ಇತ್ತ ಇಂಧನ ಇಲಾಖೆ ಮಾತ್ರ ನಗರಕ್ಕೆ ಬೇಕಾದಷ್ಟು  ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಹೇಳುತ್ತಿದೆ. ನಗರಕ್ಕೆ ಬೇಕಾದಷ್ಟು ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ಕೆಲ ಸಬ್ ಸ್ಟೇಷನ್ ಗಳಲ್ಲಿ ತಾಂತ್ರಿಕ ಅಡಚಣೆಯಾಗಿರುವುದರಿಂದ ನಗರದ  ಕೆಲ ಪ್ರದೇಶಗಳಲ್ಲಿ ಮಾತ್ರ ವಿದ್ಯುತ್ ಅಭಾವ ಎದುರಾಗುತ್ತಿದೆ. ಇದನ್ನು ಶೀಘ್ರದಲ್ಲೇ ಬಗೆಹರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ಇನ್ನು ದಕ್ಷಿಣ ಬೆಂಗಳೂರು ವಲಯದ ವಿಚಾರಕ್ಕೆ ಬರುವುದಾದರೆ, ಇಲ್ಲಿಗೆ ವಿದ್ಯುತ್ ಪೂರೈಕೆ ಮಾಡುವ ಸೋಮನಹಳ್ಳಿ ಸ್ಟೇಷನ್ ನಲ್ಲಿ ತಾಂತ್ರಿಕ ಅಡಚಣೆಯಾಗಿದೆ. ಇದರಿಂದ ಈ ಭಾಗದಲ್ಲಿ  ವಿದ್ಯುತ್ ವ್ಯತ್ಯಯ ಉಂಟಾಗಿರಬಹುದು. ಈಗಾಗಲೇ ಸಮಸ್ಯೆಯನ್ನು ಪರಿಹರಿಸಲು ಸೂಚನೆ ನೀಡಲಾಗಿದ್ದು, ಆ ಕಾರ್ಯ ಪ್ರಗತಿಯಲ್ಲಿದೆ. ಇದಲ್ಲದೇ ಪೂರ್ವ ಬೆಂಗಳೂರು ಭಾಗದಲ್ಲಿಯೂ  ವಿದ್ಯುತ್ ವ್ಯತ್ಯಯ ಕಂಡುಬಂದಿದ್ದು, ಆದರೆ ಇಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಬದಲಿಗೆ ಪ್ರಮುಖ ಕೇಬಲ್ ತುಂಡಾಗಿ ಹೋಗಿರುವುದರಿಂದ ವಿದ್ಯುತ್ ವ್ಯತ್ಯಯವಾಗಿದೆ  ಅಷ್ಟೇ ಎಂದು ಇಲಾಖೆ ತಿಳಿಸಿದೆ.

ಒಟ್ಟಾರೆ ಅತ್ತ ನೀರಿಲ್ಲದೇ ಇತ್ತ ವಿದ್ಯುತ್ ಇಲ್ಲದೆ ನಿಜಕ್ಕೂ ಬೆಂಗಳೂರಿನ ಜನತೆ ಬಿಸಿಲ ಬೇಗೆಗೆ ಬೆವರುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com