

ಮೈಸೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 25 ಸಾವಿರ ಹುದ್ದೆಗಳಿಗೆ ಶೀಘ್ರವೇ ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮೈಸೂರಿನ ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ತರಬೇತಿ ಶಾಲೆಯ 1ನೇ ತಂಡದ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ 25 ಸಾವಿರ ಪೊಲೀಸರ ನೇಮಕಾತಿ ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸೂಚನೆ ನೀಡಿತ್ತು.
ರಾಜ್ಯ ಪೊಲೀಸ್ ಇಲಾಖೆಯಿಂದ ಮುಂದಿನ ವಾರ 650 ಪಿಎಸ್‍ಐ ಹಾಗೂ 8 ಸಾವಿರ ಪೇದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ಈಗಾಗಲೇ 19 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದರಂತೆ 650 ಪಿಎಸ್‍ಐ ಹಾಗೂ 8 ಸಾವಿರ ಪೇದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ರಾಜ್ಯದ್ಯಾಂತ ಒಟ್ಟು 35 ಪೊಲೀಸ್ ಠಾಣೆಗಳನ್ನು ಶೀಘ್ರವೇ ತೆರೆಯಲಾಗುವುದು, ರಾಜ್ಯದ ಮಹಿಳೆಯರಿಗೆ ರಕ್ಷಣೆ ನೀಡಲು 5 ಜಿಲ್ಲೆಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲಾಗುವುದು. ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಲ್ಲಿ ಶೇ.20ರಷ್ಟು ಮಹಿಳಾ ಕಾನ್ಸ್‌ಟೇಬಲ್ ನೇಮಿಸಿಕೊಳ್ಳಲಾಗುವುದು. ಮಹಿಳಾ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿಯೇ ಪ್ರಕರಣ ನಿರ್ವಹಿಸಲಿದ್ದಾರೆ ಎಂದರು. ಇಲಾಖೆಯಲ್ಲಿನ ಖಾಲಿ ಇರುವ 25ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ನೇಮಿಸಿಕೊಳ್ಳಲು ಮುಂದಾಗಿದ್ದೇವೆ. ಈಗಾಗಲೇ 17 ಸಾವಿರ ಪೊಲೀಸ್ ನೇಮಕ ನಡೆದಿದೆ ಪರಮೇಶ್ವರ್ ವಿವರಿಸಿದರು.