

ಬೆಂಗಳೂರು: ಬೆಳ್ಳಂದೂರು ಕೆರೆ ಸುತ್ತಲು ಪ್ರದೇಶದಲ್ಲಿ ರೂಪಿಸಲಾಗಿರುವ ಕಟ್ಟಡ ನಿರ್ಮಾಣ ಯೋಜನೆಗೆ ಅನುಮತಿ ನೀಡದಂತೆ ಬಿಬಿಎಂಪಿ ಹಾಗೂ ಬಿಡಿಎಗೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.
ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಅಧಿಕಾರಿಗಳು ಕೆಎಸ್ ಪಿಸಿಬಿ ಸುತ್ತೋಲೆಯನ್ನು ಅನುಸರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಂತೆ ಕೋರಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಅರ್ಜಿಯೊಂದು ದಾಖಲಾಗಿತ್ತು.
ಈ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ.ಎಸ್.ಕೆ. ಮುಖರ್ಜಿ ಮತ್ತು ನ್ಯಾ.ರವಿಮಳಿಮಠ ಅವರಿದ್ಧ ವಿಭಾಗೀಯ ಪೀಠ, ಅರ್ಜಿ ಇತ್ಯರ್ಥವಾಗುವವರೆಗೂ ಬೆಳ್ಳಂದೂರು ಸುತ್ತಲಿನ ಜಾಗದಲ್ಲಿ ಲೇಔಟ್ ರಚನೆ, ಅಪಾರ್ಟ್ ಮೆಂಟ್ ಹಾಗೂ ಇತರೆ ಕಟ್ಟಡ ನಿರ್ಮಾಣ ಕಾಮಗಾರಿ ಯೋಜನೆಗೆ ಅವಕಾಶ ಕಲ್ಪಿಸದಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಬೆಳ್ಳಂದೂರು ಕೆರೆ ಸುತ್ತಲಿನ ಹಳ್ಳಿಗಳಲ್ಲಿ ನಿರ್ಮಿಸಿದ ಕಟ್ಟಡಗಳ ಕಲುಷಿತ ನೀರನ್ನು ಕೆರೆಗೆ ಬಿಡಲಾಗಿದೆ. ಪರಿಣಾಮ ಕೆರೆಯ ನೀರು ಸಂಪೂರ್ಣವಾಗಿ ಮಾಲಿನ್ಯವಾಗಿದೆ. ಅಲ್ಲದೆ ಈ 110 ಗ್ರಾಮಗಳಲ್ಲಿ 50 ಕ್ಕೂ ಹೆಚ್ಚು ಮನೆಗಳಿರುವ ವಸತಿ ಸಮುಚ್ಚಯ ಇಲ್ಲವೇ, 50 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ಕಟ್ಟಡಗಳು ತನ್ನಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯು 2007ರಲ್ಲಿ ಸುತ್ತೋಲೆ ಹೊರಡಿಸಿತ್ತು. ಆದರೆ ಈ ಸುತ್ತೋಲೆಯನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ ಎಂದು ಅರ್ಜಿದಾರರು ನ್ಯಾಯಾಲಯ ಮೆಟ್ಟಿಲೇರಿದ್ದರು.