
ಬೆಂಗಳೂರು: ರಾಜ್ಯ ಪೊಲೀಸರು ಸಾಮೂಹಿರ ರಜೆ ಹಾಕಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.
ವೇತನ ತಾರತಮ್ಯ, ರಜೆ ಸೌಲಭ್ಯ ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ಆಗ್ರಹಿಸಿ ಕೆಲವು ತಿಂಗಳ ಹಿಂದಷ್ಟೇ ಪೊಲೀಸರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ತೀವ್ರ ಸಂಚಲನವನ್ನು ಮೂಡಿಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪೊಲೀಸರ ವಿರುದ್ಧ ಎಸ್ಮಾ ಬ್ರಹ್ಮಾಸ್ತ್ರವನ್ನು ಉಪಯೋಗಿಸಲು ಮುಂದಾಗಿತ್ತು. ಸರ್ಕಾರದ ಎಚ್ಚರಿಕೆ ಹಾಗೂ ಬೇಡಿಕೆ ಈಡೇರಿಕೆ ಭರವಸೆ ನಂತರ ಪೊಲೀಸರು ಪ್ರತಿಭಟನೆಯನ್ನು ಹಿಂಪಡೆದಿದ್ದರು. ಆದರೆ, ಪೊಲೀಸರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದ ವಿ.ಶಶಿಧರ್ ಅವರನ್ನು ಜೂನ್. 2 ರಂದು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಅಲ್ಲದೆ, ಶಶಿಧರ್ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಇದರಂತೆ ಜಾಮೀನು ನೀಡುವಂತೆ ಕೋರಿ ಶಶಿಧರ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣವನ್ನು ನಿನ್ನೆ ಪರಿಶೀಲನೆ ನಡೆಸಿರುವ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು, ಶಶಿಧರ್ ಭಟ್ ಯಾರು ಎಂಬುದೇ ರಾಜ್ಯದ ಜನತೆಗೆ ಗೊತ್ತಿರಲಿಲ್ಲ. ಅವರನ್ನು ನೀವೇ ಹೀರೋ ಮಾಡಿದಿರಿ. ಆತನ ಪಾಡಿಗೆ ಆತನನ್ನು ಬಿಟ್ಟುಬಿಡಿ ಎಂದು ನ್ಯಾಯಮೂರ್ತಿ ವಿಚಾರಣೆ ವೇಳೆ ಮೌಖಿಕವಾಗಿ ಹೇಳಿದರು.
Advertisement