

ಬೆಂಗಳೂರು: ಸಾಲ ನೀಡಿದ ಸಾಲಗಾರರ ಬೆದರಿಕೆಯಿಂದ ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಸಾಲ ನೀಡಿದಾತನನ್ನು ಕೊಂದು ಆತನ ತಲೆ ಕಡಿದು ಪೊಲೀಸ್ ಠಾಣೆಗೆ ತಂದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ದೇವನಹಳ್ಳಿಯ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ಕಿಯಲ್ಲಿ ಈ ಘಟನೆ ನಡೆದಿದ್ದು, ಶಶಿ ಕುಮಾರ್ ಎಂಬಾತ ಮಂಜುನಾಥ್ ಎಂಬಾತನನ್ನು ಹತ್ಯೆ ಮಾಡಿ ಬಳಿಕ ಆತನ ತಲೆ ಕಡಿದು ಪೊಲೀಸ್ ಠಾಣೆಗೆ ತಂದಿದ್ದಾನೆ. ಶಶಿಕುಮಾರ್ ನ ಕೆಲಸದಿಂದ ಬೆಚ್ಚಿಬಿದ್ದಿರುವ ವಿಶ್ವನಾಥಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಸ್ತುತ ಆತನನ್ನು ಬಂಧಿಸಿದ್ದಾರೆ. ಶಶಿ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ವೇಳೆ ಶಶಿ ಕುಮಾರ್ ತಾನು ಕೊಲೆಯಾದ ಮಂಜುನಾಥ್ ಎಂಬ ವ್ಯಕ್ತಿಯಿಂದ ಸುಮಾರು 27 ಸಾವಿರ ರು. ಸಾಲ ಪಡೆದಿದ್ದು, ಈ ಸಾಲವನ್ನು ವಾಪಸ್ ಕೊಡುವಂತೆ ಮಂಜುನಾಥ್ ಮತ್ತು ಆತನ ಸ್ನೇಹಿತರು ಬೆದರಿಕೆ ಹಾಕಿದ್ದರು. ಬೆದರಿಕೆಯಿಂದ ರೊಚ್ಚಿಗೆದ್ದು ಮಂಜುನಾಥ್ ನನ್ನು ಕೊಂದಿರುವುದಾಗಿ ಶಶಿ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.