ಅಕ್ರಮ ಒತ್ತುವರಿ: ನಟ ದರ್ಶನ್ ಮನೆಗೆ ತಾತ್ಕಾಲಿಕ ರಿಲೀಫ್

ನಟ ದರ್ಶನ್ ಗೆ ತಾತ್ಕಾಲಿಕ ರಿಲೀಫ್ ದೊರೆತಿದ್ದು, ವಿವಾದಿತ ಸ್ಥಳದಲ್ಲಿ ಸರ್ವೇ ಕಾರ್ಯ ಪೂರ್ಣಗೊಳ್ಳುವ ವರೆಗೂ ಒತ್ತುವರಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಆರ್ ಆರ್ ನಗರದ ಐಡಿಯಲ್ ಹೋಮ್ಸ್ ನಲ್ಲಿರುವ ನಟ ದರ್ಶನ್ ನಿವಾಸ (ಸಂಗ್ರಹ ಚಿತ್ರ)
ಆರ್ ಆರ್ ನಗರದ ಐಡಿಯಲ್ ಹೋಮ್ಸ್ ನಲ್ಲಿರುವ ನಟ ದರ್ಶನ್ ನಿವಾಸ (ಸಂಗ್ರಹ ಚಿತ್ರ)

ಬೆಂಗಳೂರು: ಕನ್ನಡದ ಖ್ಯಾತ ನಟ ದರ್ಶನ ತೂಗುದೀಪ ಅವರ ರಾಜರಾಜೇಶ್ವರಿ ನಗರದ ನಿವಾಸ ಅಕ್ರಮವಾಗಿದ್ದು, ಅದರ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂಬ ಸುದ್ದಿಗಳ  ಬೆನ್ನಲ್ಲೇ ನಟ ದರ್ಶನ್ ಗೆ ತಾತ್ಕಾಲಿಕ ರಿಲೀಫ್ ದೊರೆತಿದ್ದು, ವಿವಾದಿತ ಸ್ಥಳದಲ್ಲಿ ಸರ್ವೇ ಕಾರ್ಯ ಪೂರ್ಣಗೊಳ್ಳುವ ವರೆಗೂ ಒತ್ತುವರಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಬಿಬಿಎಂಪಿ  ಸ್ಪಷ್ಟಪಡಿಸಿದೆ.

ರಾಜಾಕಾಲುವೆ ಹಾಗೂ ಕೆರೆಗಳ ಅಕ್ರಮ ಒತ್ತುವರಿ ವಿರುದ್ಧ ರಣಕಹಳೆ ಮೊಳಗಿಸಿರುವ ಬಿಬಿಎಂಪಿ ಅಕ್ರಮ ಮನೆಗಳ ನೆಲಸಮ ಮಾಡುತ್ತಿದೆಯಾದರೂ, ವಿವಾದಾತ್ಮಕ ಪ್ರದೇಶದಲ್ಲಿರುವ  ಪ್ರಭಾವಿಗಳ ಮನೆಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಹಳ್ಳದಲ್ಲಿದೆ ಎಂದು ಹೇಳಲಾಗುತ್ತಿರುವ ನಟ ದರ್ಶನ್ ಅವರ ರಾಜರಾಜೇಶ್ವರಿ  ನಗರದ ನಿವಾಸ ಕಾರ್ಯಾಚರಣೆಯಿಂದ ತಾತ್ಕಾಲಿಕ ಮುಕ್ತಿ ಪಡೆದಿದೆ. ವಿವಾದಿತ ಸ್ಥಳದಲ್ಲಿ ಸರ್ವೇ ಕಾರ್ಯ ಪೂರ್ಣಗಳ್ಳುವವರೆಗೂ ಕಾರ್ಯಾಚರಣೆ ನಡೆಸದಂತೆ ಬಿಬಿಎಂಪಿ ಆಯುಕ್ತ  ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

​ರಾಜರಾಜೇಶ್ವರಿನಗರ ಐಡಿಯಲ್ ಹೋಂ ಬಡಾವಣೆಯಲ್ಲಿರುವ ನಟ ದರ್ಶನ್ ಮನೆಯ ಶೇ.30 ಭಾಗ ರಾಜಕಾಲುವೆ ಆಕ್ರಮಿಸಿರುವುದು ಪ್ರಾಥಮಿಕ ವರದಿಯಿಂದ ಖಚಿತವಾಗಿದೆ ಎಂದು  ಹೇಳಲಾಗುತ್ತಿದ್ದು, ಮೇಯರ್ ಮಂಜುನಾಥ ರೆಡ್ಡಿ ಈ ವಿಷಯವನ್ನು ದೃಢಪಡಿಸಿದ್ದಾರಾದರೂ ಆಯುಕ್ತ ಮಂಜುನಾಥ ಪ್ರಸಾದ್ ಮಾತ್ರ ಸರ್ವೇ ವರದಿ ಬರಲು ಇನ್ನೂ 3 ದಿನ ಬೇಕಿದ್ದು, ಅಲ್ಲಿವರೆಗೆ  ತೆರವು ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರತಿಷ್ಠಿತರಿಂದಾಗಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಜಂಟಿ ಸರ್ವೇ ನಡೆಸಲು ಸರ್ವೇ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ  ಪ್ರಸಾದ್ ಸೂಚಿಸಿದ್ದಾರೆ. ಸೋಮವಾರ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು. 17 ದಿನಗಳಿಂದ ನಡೆಸಲಾಗುತ್ತಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ  ಆರಂಭದ ಉತ್ಸಾಹ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಚುರುಕು ಮುಟ್ಟಿಸುವುದು ಸಭೆಯ ಉದ್ದೇಶವಾಗಿತ್ತು. ಈವರೆಗೆ ನಡೆಸಿರುವ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದ ಆಯುಕ್ತರು,  ಪ್ರತಿಷ್ಠಿತರಿಂದ ಆಗಿರುವ ಒತ್ತುವರಿ ತೆರವಿಗೆ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದರು.

ಸಾಮಾನ್ಯರಿಗಿಲ್ಲದ ವರದಿ ಪ್ರಭಾವಿಗಳಿಗೇಕೆ?
ಇನ್ನು ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ವೇ ವರದಿ ಬರುವ ಮುನ್ನವೇ ಅಧಿಕಾರಿಗಳು ನಮ್ಮ ಮನೆಯನ್ನು  ನೆಲಸಮಗೊಳಿಸಿದ್ದಾರೆ. ನಮಗಿಲ್ಲದ ವರದಿ ಪ್ರಭಾವಿಗಳಿಗೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಆಯುಕ್ತರು ಹೇಳುವಂತೆ ಸರ್ವೇ ಮತ್ತು ಕಂದಾಯ ಇಲಾಖೆ ಈ ಹಿಂದೆ 109 ಆಸ್ತಿಗಳಿಂದಾಗಿರುವ  ಒತ್ತುವರಿಯ ವರದಿಯನ್ನಷ್ಟೇ ನೀಡಿದ್ದವು. ಅದರ ಆಧಾರದ ಮೇಲೆ ಈಗಾಗಲೆ ಕಾರ್ಯಾಚರಣೆ ನಡೆಸಲಾಗಿದೆ. ಪ್ರತಿಷ್ಠಿತರ ಒತ್ತುವರಿ ಬಗ್ಗೆ ಮಾತ್ರ ಜಂಟಿ ಸರ್ವೇ ನಡೆಸಿ ವರದಿ  ಸಿದ್ಧಪಡಿಸುತ್ತಿದ್ದೇವೆ ಎಂಬ ಮಾತಗಳನ್ನಾಡಿದ್ದಾರೆ. ಹಾಗಾದರೆ, ಸಾಮಾನ್ಯ ಜನರಿಗಿಲ್ಲದ ಜಂಟಿ ಸರ್ವೇ, ವರದಿ ಸಿದ್ಧಪಡಿಸಿದ ನಂತರ ಚರ್ಚೆ ನಡೆಸುವುದು ಪ್ರತಿಷ್ಠಿತರಿಗೆ ಮಾತ್ರ ಏಕೆ? ಎಂಬ  ಪ್ರಶ್ನೆ ಉದ್ಭವವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com