ಒತ್ತುವರಿ ತೆರವು ಕಾರ್ಯಾಚರಣೆ; ನಟ ದರ್ಶನ್ ಮನೆಗೂ ಬಂತು ಕುತ್ತು..!
ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರ ನಗರದಲ್ಲಿರುವ ನಟ ದರ್ಶನ ಅವರ ಮನೆ ರಾಜಾ ಕಾಲುವೆಯಲ್ಲಿದ್ದು, ರಾಜಾಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬೆಂಗಳೂರು ಮೇಯರ್ ಮಂಜುನಾಥ್ ರೆಡ್ಡಿ ಅವರು ಮಾಹಿತಿ ನೀಡಿದ್ದು, ಬಿಬಿಎಂಪಿ ಮೂಲನಕ್ಷೆಯ ಪ್ರಕಾರ ಪ್ರಸ್ತುತ ದರ್ಶನ್ ಅವರ ನಿವಾಸವಿರುವ ಜಾಗದಲ್ಲಿ ರಾಜಾಕಾಲುವೆ ಇದ್ದು, ರಾಜಾಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ದರ್ಶನ್ ಅವರ ಮನೆಯ ಪ್ರವೇಶ ದ್ವಾರದಲ್ಲಿ ರಾಜಾಕಾಲುವೆ ಹಾದು ಹೋಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ದರ್ಶನ್ ಅವರ ಮನೆ ವಿವಾದಿತ ಪ್ರದೇಶದಲ್ಲಿದೆ ಎಂಬ ಅನುಮಾನಗಳಿವೆ. ಹೀಗಾಗಿ ಸರ್ವೇ ಕಾರ್ಯ ನಡೆಸಲಾಗಿತ್ತು. ಸರ್ವೇ ಇಲಾಖೆಯಿಂದ ವರದಿ ಬಂದ ಬಳಿಕ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ತೆರವು ಮಾಡುವುದು ನಿಶ್ಚಿತ. ಯಾರ ಮುಲಾಜಿಗೂ ತಾವು ಬಗ್ಗುವುದಿಲ್ಲ. ಅಕ್ರಮ ಎಂದು ಕಂಡು ಬಂದರೆ ಖಂಡಿತ ಅದನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ರಾಜಾಕಾಲುವೆ ಹಾಗೂ ಕೆರೆಗಳ ಅಕ್ರಮ ಒತ್ತುವರಿ ವಿರುದ್ಧ ರಣಕಹಳೆ ಮೊಳಗಿಸಿರುವ ಬಿಬಿಎಂಪಿ ಅಕ್ರಮ ಮನೆಗಳ ನೆಲಸಮ ಮಾಡುತ್ತಿದೆಯಾದರೂ, ವಿವಾದಾತ್ಮಕ ಪ್ರದೇಶದಲ್ಲಿರುವ ಪ್ರಭಾವಿಗಳ ಮನೆಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಪೈಕಿ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಹಾಗೂ ನಟ ದರ್ಶನ್ ನಿವಾಸ ಕೂಡ ವಿವಾದಿತ ಪ್ರದೇಶದಲ್ಲಿದೆ ಎಂದು ಹೇಳಲಾಗುತ್ತಿತ್ತು.
ರಾಜರಾಜೇಶ್ವರಿನಗರ ಐಡಿಯಲ್ ಹೋಂ ಬಡಾವಣೆಯಲ್ಲಿರುವ ನಟ ದರ್ಶನ್ ಮನೆಯ ಶೇ.30 ಭಾಗ ರಾಜಕಾಲುವೆ ಆಕ್ರಮಿಸಿರುವುದು ಸರ್ವೇ ಪ್ರಾಥಮಿಕ ವರದಿಯಿಂದ ಖಚಿತವಾಗಿತ್ತು. ಮೇಯರ್ ಮಂಜುನಾಥ ರೆಡ್ಡಿ ಈ ವಿಷಯವನ್ನು ದೃಢಪಡಿಸಿದ್ದಾರಾದರೂ ಆಯುಕ್ತ ಮಂಜುನಾಥ ಪ್ರಸಾದ್ ಮಾತ್ರ ಸರ್ವೇ ವರದಿ ಬರಲು ಇನ್ನೂ 3 ದಿನ ಬೇಕಿದ್ದು, ಅಲ್ಲಿವರೆಗೆ ತೆರವು ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಹೇಳಿದ್ದರು. ಇದೀಗ ಸರ್ವೇ ವರದಿ ಬಂದಿದ್ದು, ಈಗಲಾದರೂ ಬಿಬಿಎಂಪಿ ಅಧಿಕಾರಿಗಳು ಎಲ್ಲರಂತೆ ದರ್ಶನ್ ಮನೆ ವಿರುದ್ಧವೂ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ