ರಾಸಲೀಲೆ ಆರೋಪ ಸಾಬೀತಾದರೆ ಮೇಟಿ ರಾಜಿನಾಮೆ ಖಂಡಿತ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಅಬಕಾರಿ ಸಚಿವ ಎಚ್.ವೈ ಮೇಟಿ ಅವರ ವಿರುದ್ಧದ ರಾಸಲೀಲೆ ಪ್ರಕರಣ ಸಾಬೀತಾದರೆ ಅವರು ಖಂಡಿತಾ ರಾಜಿನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಕ್ಷ್ಯ ಇರುವ ಸಿಡಿ ಬಿಡುಗಡೆಯಾದರೆ ತಕ್ಷಣವೇ ರಾಜೀನಾಮೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಮೇಟಿಯಷ್ಟೇ ಅಲ್ಲ, ಯಾರೇ ತಪ್ಪು ಮಾಡಿದರೂ ತಪ್ಪೇ. ಇದರಲ್ಲಿ ನಮ್ಮ ನೈತಿಕತೆ ಪ್ರಶ್ನೆಯೂ ಇರುತ್ತದೆ. ಮೇಟಿ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಸಾಕ್ಷ್ಯ ಇರುವ ಸೀಡಿ ಬಿಡುಗಡೆಯಾದರೆ ತಕ್ಷಣವೇ ರಾಜೀನಾಮೆ ಪಡೆಯಲಾಗುವುದು. ಅವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮೀನ-ಮೇಷ ಎಣಿಸುತ್ತಿಲ್ಲ. ಮೇಟಿ ಅವರಿಂದ ಯಾವುದೇ ರೀತಿಯ ವಿವರಣೆಯನ್ನೂ ಕೇಳಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ನಿನ್ನೆ ಈ ಪ್ರಕರಣ ಸಂಬಂಧ ವಿವರ ನೀಡಲು ಸಚಿವ ಎಚ್ ವೈ ಮೇಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದು, ಈ ವೇಳೆ ಸಿದ್ದರಾಮಯ್ಯ ಅವರು ಖಾರವಾಗಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಮೇಟಿ ವಿರುದ್ಧದ ಆರೋಪದಿಂದ ಸರ್ಕಾರಕ್ಕೆ ಮುಜುಗರವಾಗಿದ್ದು, ಆರೋಪ ಸಾಬೀತಾದರೆ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಹೇಳೆ ಅರ್ಧಕ್ಕೆ ದೂರವಾಣಿ ಕರೆಯನ್ನು ಕಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಪ್ರಕರಣ ಸಂಬಂಧ ರಾಜ್ಯ ಪೊಲೀಸರನ್ನು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳಿಂದಲೂ ಸಿಎಂ ಸಿದ್ದರಾಮಯ್ಯ ಮಾಹಿತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಆರೋಪ ಸಾಬೀತಾದರೆ ರಾಜಿನಾಮೆ ನೀಡಿ: ಮೇಟಿಗೆ ಪರಮೇಶ್ವರ್ ತಾಕೀತು
ಇನ್ನು ರಾಸಲೀಲೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪ ಸಂಬಂಧ ವಿವರಣೆ ನೀಡಲು ಸಚಿವ ಎಚ್ ವೈ ಮೇಟಿ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ಪರಮೇಶ್ವರ ಅವರು ಆರೋಪ ಸಾಬೀತಾದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಆರೋಪ ಮಾಡಿರುವ ಆರ್ ಟಿಐ ಕಾರ್ಯಕರ್ತ ರಾಜಶೇಖರ್‌ಗೆ ಬಳ್ಳಾರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣ ಹಾಗೂ ಸಚಿವರ ವಿರುದ್ಧ ರಾಜಶೇಖರ್ ಮಾಡಿರುವ ಆರೋಪಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ನೋಟಿಸ್ ನಲ್ಲಿ ಪೊಲೀಸರು ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ