

ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲು ಹೇರಲಾಗಿದ್ದ ನಿಯಮಗಳನ್ನು ರಾಜ್ಯ ಸರ್ಕಾರ ಸಡಿಲಿಸಿದೆ.
2008ರಲ್ಲಿ ನಡೆದಿದ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಮಹಿಳೆಯರ ರಾತ್ರಿಪಾಳಿ ಕೆಲಸಕ್ಕೆ ರಾಜ್ಯ ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ ಬಳಿಕ ಮಹಿಳೆಯರ ರಾತ್ರಿ ಪಾಳಿ ಕೆಲಸದ ಕುರಿತು ಸರ್ಕಾರಕ್ಕೆ ಬಂದ ಅಹವಾಲುಗಳ ಹಿನ್ನಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಹಿಳೆಯರು ರಾತ್ರಿಪಾಳಿ ಕೆಲಸ ಮಾಡಲು ತಾನು ವಿಧಿಸಿದ್ದ ಷರತ್ತುಗಳ ಹಲವು ನಿಯಮಗಳನ್ನು ಸರ್ಕಾರ ಸಡಿಲಿಸಿದೆ. ಆದರೆ ಮಹಿಳಾ ಉದ್ಯೋಗಿಯ ಭದ್ರಾತ ದೃಷ್ಟಿಯಿಂದ ಕೆಲ ನಿಯಮಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಮಹಿಳಾ ಉದ್ಯೋಗಿಗಳು ಬಯಸಿದರೆ ಮಾತ್ರ ಭದ್ರತೆಯೊಂದಿಗೆ ರಾತ್ರಿಪಾಳಿ ಕೆಲಸಕ್ಕೆ ಅನುಮತಿ ನೀಡಬಹುದು ಎಂದು ಹೇಳಿದೆ.
ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ಮತ್ತು ಫ್ಯಾಕ್ಟರಿ ಕಾಯ್ದೆ 1948ಕ್ಕೆ ತಿದ್ದುಪಡಿ ತಂದು ಮಹಿಳಾ ಉದ್ಯೋಗಿಗಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಒಟ್ಟು 11 ವಿಚಾರಗಳ ಬಗ್ಗೆ ಸರ್ಕಾರ ಷರತ್ತು ವಿಧಿಸಿದ್ದು, ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿರಬೇಕು. ಅಂತೆಯೇ ಕೆಲಸದ ಬಳಿಕ ಉದ್ಯೋಗಿಗಳನ್ನು ಮನೆಗೆ ಬಿಡುವಾಗ ಮೊದಲ ಆದ್ಯತೆ ಮಹಿಳಾ ಉದ್ಯೋಗಿಗಳಿಗೇ ನೀಡಬೇಕು. ಕೆಲಸದ ಸ್ಥಳದಲ್ಲಿ ಹೆಚ್ಚು ಭದ್ರತೆ, ಒಂದಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುವುದು ಕಡ್ಡಾಯ ಮತ್ತು ಮಹಿಳಾ ಉದ್ಯೋಗಿಗಳಿಗಾಗಿ ಟ್ರಾವೆಲ್ ಡೆಸ್ಕ್, ಸಹಾಯವಾಣಿ ಮತ್ತು ಮಹಿಳಾ ಉದ್ಯೋಗಿಗಳನ್ನು ಕರೆತರುವಾಗ ಮತ್ತು ಮನೆಗೆ ಬಿಟ್ಟುಬರುವಾಗ ವಾಹನಗಳ ಸಂಚಾರ ಮಾರ್ಗದ ಬಗ್ಗೆ ನಿಗಾವಹಿಸುವುದು ಆಯಾ ಸಂಸ್ಥೆಗಳ ಕರ್ತವ್ಯ ಎಂದು ಸರ್ಕಾರ ಹೇಳಿದೆ. ಅಂತೆಯೇ ಪಿಕ್ ಅಪ್ ಮತ್ತು ಡ್ರಾಪ್ ವೇಳೆ ಓರ್ವ ಮಹಿಳಾ ಸಿಬ್ಬಂದಿ ಇರಬೇಕು. ಆದರೆ ಓರ್ವ ಪುರುಷ ಭದ್ರತಾ ಸಿಬ್ಬಂದಿ ಇರಬೇಕು ಎಂಬ ಹಳೆಯ ನಿಯಮವನ್ನು ಸರ್ಕಾರ ಸಡಿಲಿಸಿದೆ. ಅಂತೆಯೇ ಮಹಿಳಾ ಉದ್ಯೋಗಿಗಳ ಮೊಬೈಲ್ ಸಂಖ್ಯೆಯನ್ನು ಅಪರಿಚಿತರಿಗೆ ನೀಡಬಾರದು ಎಂಬ ನಿಯಮ ಸೇರಿದಂತೆ ಹಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಐಟಿ-ಬಿಟಿ ಸೇರಿದಂತೆ ಖಾಸಗಿ ವಲಯದ ಎಲ್ಲ ಸಂಸ್ಥೆಗಳಿಗೂ ಈ ನೂತನ ನಿಯಮಾವಳಿಗಳು ಅನ್ವಯವಾಗಲಿದೆ ಎಂದು ಅವರು ಹೇಳಿದರು. ಒಂದು ವೇಳೆ ನಿಯಮಾವಳಿಯನ್ನು ಪಾಲಿಸದಿದ್ದರೆ ಅಂತಹ ಸಂಸ್ಥೆಗಳ ನೋಂದಣಿಯನ್ನೇ ರದ್ದುಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.