ಚಿನ್ನದಂಗಡಿಗಳ ಮೇಲೆ ಐಟಿ ದಾಳಿ: ಬರೊಬ್ಬರಿ 47.7 ಕೋಟಿ ರು. ಅಕ್ರಮ ಪತ್ತೆ!

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರಂದು ನೋಟು ನಿಷೇಧ ನಿರ್ಧಾವನ್ನು ಘೋಷಣೆ ಮಾಡುತ್ತಿದ್ದಂತೆಯೇ ಭರ್ಜರಿ ವ್ಯಾಪರ ಮಾಡಿದ್ದ ಚಿನ್ನದ ಅಂಗಡಿಗಳ ಮೇಲೆ ಇದೀಗ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ಬರೊಬ್ಬರಿ 47.7 ಕೋಟಿ ಮೌಲ್ಯದ ಅಕ್ರಮ ವಹಿವಾಟನ್ನು ಪತ್ತೆ ಹಚ್ಚಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರಂದು ನೋಟು ನಿಷೇಧ ನಿರ್ಧಾವನ್ನು ಘೋಷಣೆ ಮಾಡುತ್ತಿದ್ದಂತೆಯೇ ಭರ್ಜರಿ ವ್ಯಾಪರ ಮಾಡಿದ್ದ ಚಿನ್ನದ ಅಂಗಡಿಗಳ ಮೇಲೆ ಇದೀಗ ಆದಾಯ ತೆರಿಗೆ  ಅಧಿಕಾರಿಗಳು ದಾಳಿ ಮಾಡಿದ್ದು, ಬರೊಬ್ಬರಿ 47.7 ಕೋಟಿ ಮೌಲ್ಯದ ಅಕ್ರಮ ವಹಿವಾಟನ್ನು ಪತ್ತೆ ಹಚ್ಚಿದ್ದಾರೆ.

ಶುಕ್ರವಾರ ಬೆಳಗ್ಗೆಯೇ ಬೆಂಗಳೂರಿನ ಸುಮಾರು 7 ಚಿನ್ನದಂಗಡಿಗಳ ಮೇಲೆ ಏಕಕಾಲದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಭಾರಿ ಪ್ರಮಾಣದ ಅಕ್ರಮವನ್ನು ಪತ್ತೆ ಮಾಡಿದ್ದಾರೆ. ನೋಟುನಿಷೇಧ ನಿರ್ಧಾರ ಹೊರ  ಬೀಳುತ್ತಿದ್ದಂತೆಯೇ ಕಾಳಧನಿಕರ ಬಳಿ ಇದ್ದ ಕಪ್ಪುಹಣವನ್ನು ಪಡೆದು ಅವರಿಗೆ ಅಪಾರ ಪ್ರಮಾಣದ ಆಭರಣಗಳನ್ನು ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಈ 7 ಅಂಗಡಿಗಳಲ್ಲಿ 47.74 ಕೋಟಿ ರು.  ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಚಿನ್ನದ ಅಂಗಡಿ ಮಾಲೀಕರು ಕಾಳಧನಿಕರಿಂದ ಕಮಿಷನ್ ಆಧಾರದ ಮೇಲೆ ನಿಷೇಧಿತ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ಪಡೆದು ಅವರಿಗೆ ಚಿನ್ನದ ಬಿಸ್ಕತ್ ಗಳನ್ನು ಮಾರಾಟ  ಮಾಡಿದ್ದಾರೆ. ಕೇವಲ ತಾವು ಮಾತ್ರವಲ್ಲದೇ ಈ ಭಾರಿ ಅಕ್ರಮಕ್ಕೆ ತಮಗೆ ಪರಿಚಯವಿರುವ ಸಣ್ಣ ಆಭರಣದಂಗಡಿ ಮಾಲೀಕರನ್ನು ಬಳಸಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇನ್ನು ತಮ್ಮ ವಹಿವಾಟು ಸಕ್ರಮ ಎಂದು  ಸಾಬೀತುಪಡಿಸಲು ಆಭರಣದಂಗಡಿ ಮಾಲೀಕರು ನಗದು ರಹಿತ ವಹಿವಾಟು ನಡೆಸಿದ್ದು, ಕಮಿಷನ್ ಹಣವನ್ನು ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ ಸಿಸ್ಟಮ್ಲ್ಲಿ(ಆರ್​ಟಿಜಿಎಸ್) ಪ್ರಕ್ರಿಯೆ ಮೂಲಕ ಸಂದಾಯ ಮಾಡಿಸಿಕೊಂಡಿದ್ದಾರೆ.   ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ನಡುವಿನ ಅವಧಿಯಲ್ಲೇ ಬಹುತೇಕ ಹಣಕಾಸಿನ ವಹಿವಾಟು ನಡೆದಿದ್ದು, ಈ ವಾಹಿವಾಟನ್ನು 2 ಲಕ್ಷ ರು. ಒಳಗಿನ ಮೊತ್ತದ ರೂಪದಲ್ಲೇ ಇರಿಸಲಾಗಿದೆ.

ಆಭರಣ ಕೊಂಡ ಗ್ರಾಹಕ ಹೆಸರನ್ನು ಮರೆಮಾಚಲು ಅಂಗಡಿ ಮಾಲೀಕರು ಇಂತಹ ಚಾಣಾಕ್ಷತನದ ಮಾರ್ಗ ಆಯ್ಕೆ ಮಾಡಿಕೊಂಡಿದ್ದು, 2 ಲಕ್ಷ ರು. ಒಳಗಿನ ವ್ಯವಹಾರ ಎಂದು ಉಲ್ಲೇಖಿಸಿ ಗ್ರಾಹಕರ ಪ್ಯಾನ್​ಕಾರ್ಡ್ ಸಂಖ್ಯೆಯನ್ನು  ಪಡೆಯದೆ ಹೆಸರನ್ನು ಮರೆಮಾಚಿದ್ದಾರೆ. ಅಂತೆಯೇ  ಕ್ಯಾಶ್ ಮತ್ತು ಕಾರ್ಡ್​ಗಳಲ್ಲಿ ವ್ಯವಹಾರ ನಡೆಸುತ್ತಿದ್ದ ಆಭರಣ ಮಳಿಗೆ ಮಾಲೀಕರ ಬ್ಯಾಂಕ್ ಖಾತೆಗೆ ನೋಟು ರದ್ದಾದ ಮೇಲೆ ಆಭರಣ ಖರೀದಿಯಾಗದಿದ್ದರೂ ಆರ್​ಟಿಜಿಎಸ್  ಮೂಲಕ ದೊಡ್ಡ ಮೊತ್ತದ ಹಣ ಜಮೆ ಆಗಿದೆ. ಇವರ ಖಾತೆಗೆ ಹಣ ವರ್ಗಾವಣೆ ಮಾಡಿರುವ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ನೋಟು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸುವುದಕ್ಕಿಂತ ಮುನ್ನವೇ ಆಭರಣ ಮಾರಾಟ ಮಾಡಿರುವಂತೆ ನಕಲಿ ಬಿಲ್ ಸೃಷ್ಟಿಸಿ ಕಳ್ಳಲೆಕ್ಕ ತೋರಿಸಿದ್ದಾರೆ. ವಹಿವಾಟು ಅಧಿಕೃತ ಎಂದು ತೋರಿಸಲು ವ್ಯಾಟ್ ಪಾವತಿ  ಮಾಡಿದ್ದಾರೆ. ಹಿಂದಿನ ವಹಿವಾ ಟಿಗಿಂತ ಕೇವಲ ಒಂದೆರಡು ತಿಂಗಳಲ್ಲೇ ಹಲವು ಪಟ್ಟು ವ್ಯಾಪಾರ ಮಾಡಿದ್ದು, ಹಲವು ವರ್ಷಗಳಿಂದ ತೆರಿಗೆ ಪಾವತಿ ಮಾಡದೆ ಇದ್ದ ಕೆಲ ಆಭರಣ ಮಳಿಗೆ ಮಾಲೀಕರು ದಿಢೀರನೆ ಆದಾಯ ತೆರಿಗೆ  ಪಾವತಿ ಮಾಡಿ ಸಾಚಾತನ ತೋರಿಸಿರುವುದು ಬಯಲಾಗಿದೆ.

ಐಟಿ ದಾಳಿ ಸುಳಿವು ಅರಿತ ಮಾಲೀಕರಿಂದ ಸಾಕ್ಷ್ಯನಾಶ!
ಇನ್ನು ಕಮರ್ಷಿಯಲ್ ಸ್ಟ್ರೀಟ್​ನಲ್ಲಿರುವ ಕೆಲ ದೊಡ್ಡ ಆಭರಣ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಕೆಜಿಗಟ್ಟಲೆ ಚಿನ್ನಾಭರಣ ಖರೀದಿ ಮಾಡಿರುವ ಬಿಲ್​ಗಳು ಪತ್ತೆಯಾಗಿದ್ದವು. ಆದರೆ ಅಧಿಕಾರಿಗಳು  ಅಂಗಡಿಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಾಲೀಕರು ಅವುಗಳನ್ನು ನಾಶಮಾಡಿದ್ದರು. ಅಧಿಕಾರಿಗಳು ದಾಳಿ ನಡೆಸುವ ಮುನ್ಸೂಚನೆ ಪಡೆದಿದ್ದ ಮಾಲೀಕರು ಮೊದಲೇ ಸಿಸಿಟಿವಿ ದೃಶ್ಯಾವಳಿಯನ್ನು  ನಾಶ ಪಡಿಸುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದರು. ಬಿಲ್​ನಲ್ಲಿ ಉಲ್ಲೇಖಿಸಿದ್ದ ಹೆಸರು, ಮೊಬೈಲ್ ನಂಬರ್ ಜಾಡು ಹಿಡಿದಾಗ ಉದ್ಯಮಿಗಳು, ರಾಜಕೀಯ ಮುಖಂಡರು, ಸರ್ಕಾರಿ ಅಧಿಕಾರಿಗಳು, ಮನೆ ಕೆಲಸಗಾರರು, ಕಾರು  ಚಾಲಕರರು, ಅಡುಗೆ ಭಟ್ಟರ ಹೆಸರಿನಲ್ಲಿ ಕೆ.ಜಿಗಟ್ಟಲೆ ಚಿನ್ನ ಖರೀದಿಸಿರುವುದು ಬೆಳಕಿಗೆ ಬಂದಿತ್ತು.

ಗುತ್ತಿಗೆದಾರರಿಗೂ ಐಟಿ ಶಾಕ್
ಇದೇ ವೇಳೆ ನಗರದ ರಿಚ್ ಮಂಡ್ ಟೌನ್​ನಲ್ಲಿರುವ ಗೋಪಾಲನ್ ಎಂಟರ್​ ಪ್ರೈಸಸ್, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಗುತ್ತಿಗೆದಾರರ ಕಚೇರಿಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ  ನಡೆಸಿದ್ದರು. ಅಂತೆಯೇ ಸದಾಶಿವನಗರದ ಇಬ್ಬರು ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ  ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com