ಹುಲಿಯನ್ನು ಕಾಡಿಗಟ್ಟುವ ವೇಳೆ ಮಿಸ್ ಫೈರ್: ಓರ್ವ ಸಾವು ಇಬ್ಬರಿಗೆ ಗಾಯ

ಹುಲಿಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕಿನಿಂದ ಹಾರಿದ ಗುಂಡಿಗೆ ವ್ಯಕ್ತಿಯೊಬ್ಬ ...
ಕಾರ್ಯಾಚರಣೆ ವೇಳೆ ಗಾಯಗೊಂಡ ಅರಣ್ಯ ಇಲಾಖೆ ಸಿಬ್ಬಂದಿ
ಕಾರ್ಯಾಚರಣೆ ವೇಳೆ ಗಾಯಗೊಂಡ ಅರಣ್ಯ ಇಲಾಖೆ ಸಿಬ್ಬಂದಿ
Updated on: 

ಮೈಸೂರು: ಎರಡು ಮರಿಗಳೊಂದಿಗೆ ತೋಟದಲ್ಲಿ ಬೀಡುಬಿಟ್ಟಿದ್ದ ಹುಲಿಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕಿನಿಂದ ಹಾರಿದ ಗುಂಡಿಗೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವ್ಯಾಪ್ತಿಯ ಮಳಲಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಎನ್‌.ಬೆಳ್ತೂರು ಗ್ರಾಮದ ನಂಜಪ್ಪ ಎಂಬುವರ ಪುತ್ರ ಮೂರ್ತಿ (25) ಮೃತಪಟ್ಟವರು. ಅಂತರಸಂತೆ ವಲಯದ ಆರ್‌ಎಫ್‌ಒ ಮಹೇಶ್‌ ಹಾಗೂ ಹೊಸಹೊಳಲು ಗ್ರಾಮದ ಕೆಂಚಯ್ಯ ಅವರಿಗೆ ಗುಂಡು ತಗುಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಕೆರಳಿದ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ ಕಾಡಿಗೆ ಹಿಂತಿರುಗಿಸುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹುಲಿಯು ಮಳಲಿ ಗ್ರಾಮದ ಪ್ರಕಾಶ ಎಂಬುವರ ತೋಟದಲ್ಲಿ ಬುಧವಾರ ರಾತ್ರಿ ಕಾಣಿಸಿಕೊಂಡಿದೆ. ಮರಿಗಳೊಂದಿಗೆ ಹುಲಿಯನ್ನು ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸುಮಾರು 9 ತಿಂಗಳ ಮರಿಗಳನ್ನು ತೋಟದಲ್ಲಿ ಬಿಟ್ಟು ಹುಲಿ ಕಾಡಿನಲ್ಲಿ ಕಣ್ಮರೆಯಾಗಿದೆ.

ಪಟಾಕಿ ಸಿಡಿಸುತ್ತ ಮರಿಗಳನ್ನು ಅರಣ್ಯಕ್ಕೆ ಮರಳಿಸುವ ಕಾರ್ಯಾಚರಣೆ ಮಧ್ಯಾಹ್ನ ಊಟದ ಬಳಿಕ ಮತ್ತೆ ಶುರುವಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಯ ಪ್ರಯತ್ನಕ್ಕೆ ಗ್ರಾಮಸ್ಥರು ನೆರವಾಗಿದ್ದರು. ತೋಟದಿಂದ ಹೊರಬಂದು ಪೊದೆಯೊಂದರಲ್ಲಿ ಅವಿತಿದ್ದ ಮರಿ ಹುಲಿ ಗಾರ್ಡ್‌ಗಳ ಮೇಲೆ ಎರಗಲು ಮುಂದಾಯಿತು. ಈ ವೇಳೆ ಡಬಲ್‌ ಬ್ಯಾರಲ್‌ ಬಂದೂಕಿನಿಂದ ಹಾರಿದ ಗುಂಡುಗಳು ಮೂರ್ತಿ, ಮಹೇಶ್‌, ಕೆಂಚಯ್ಯ ಅವರಿಗೆ ತಗುಲಿದವು. ಗಾಯಾಳುಗಳನ್ನು ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಮೂರ್ತಿ ಮೃತಪಟ್ಟರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹುಲಿಯನ್ನು ಕಾಡಿಗಟ್ಟಲು ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ ಮರಿಗಳನ್ನು ಓಡಿಸಲು ವಿಫಲರಾಗಿದ್ದಾರೆ. ಸದ್ಯ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಮೃತ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆ 5 ಲಕ್ಷ ರು ಪರಿಹಾರ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com