ಸಾಮಾಜಿಕ ಜವಾಬ್ದಾರಿಯತ್ತ ಮೆಟ್ರೋ ಚಿತ್ತ: 5 ನಿಲ್ದಾಣಗಳಲ್ಲಿ ಶಿಶು ಪಾಲನಾ ಕೇಂದ್ರಕ್ಕೆ ಚಿಂತನೆ

ಮೆಟ್ರೋ ಅಭಿವೃದ್ಧಿ ಮಾಡುವುದರಲ್ಲೇ ಚಿತ್ತ ಹರಿಸಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಇದೀಗ ಸಾಮಾಜಿಕ ಜವಾಬ್ದಾರಿಯತ್ತಲೂ ಗಮನಹರಿಸಿದ್ದು, ಶೀಘ್ರದಲ್ಲೇ ಮೆಟ್ರೋದ 5 ನಿಲ್ದಾಣಗಳಲ್ಲಿ...
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)

ಬೆಂಗಳೂರು: ಮೆಟ್ರೋ ಅಭಿವೃದ್ಧಿ ಮಾಡುವುದರಲ್ಲೇ ಚಿತ್ತ ಹರಿಸಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಇದೀಗ ಸಾಮಾಜಿಕ ಜವಾಬ್ದಾರಿಯತ್ತಲೂ ಗಮನಹರಿಸಿದ್ದು, ಶೀಘ್ರದಲ್ಲೇ ಮೆಟ್ರೋದ 5 ನಿಲ್ದಾಣಗಳಲ್ಲಿ ಶಿಶುಪಾಲನಾ ಕೇಂದ್ರ ಹಾಗೂ ಇನ್​ಕ್ಯುಬೇಶನ್ ಕೇಂದ್ರಗಳನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ.

ಬೈಯಪ್ಪನಹಳ್ಳಿ, ಇಂದಿರಾನಗರ, ಹೊಸೂರು, ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಶಿಶುಪಾಲನಾ ಕೇಂದ್ರ ಹಾಗೂ ಇನ್​ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಈಗಾಗಲೇ ಅಧಿಕಾರಿಗಳು ಟೆಂಡರ್ ನ್ನು ಕರೆದಿದ್ದಾರೆಂದು ತಿಳಿದುಬಂದಿದೆ.

ಮೆಟ್ರೋ ನಿಲ್ದಾಣ ಜನನಿಬಿಡ ಪ್ರದೇಶವಾಗಿದ್ದು, ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಆರೋಗ್ಯ ಜವಾಬ್ದಾರಿ ಪ್ರಮುಖವಾಗಿರುತ್ತದೆ. ಇದಕ್ಕಾಗಿ ನಿಲ್ದಾಣದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಶಿಶುಪಾಲನಾ ಕೇಂದ್ರಗಳು ಬೆಳಿಗ್ಗೆ 8 ರಿಂದ ಸಂಜೆ 6ಗಂಟೆಯವರೆಗು ಕಾರ್ಯನಿರ್ವಹಿಸಲಿದೆ. ಶಿಶು ಪಾಲನಾ ಕೇಂದ್ರಗಳಲ್ಲಿ ಮಕ್ಕಳ ವೈದ್ಯರು, ದಾದಿಯರು ತುರ್ತು ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಾರೆಂದು  ಬಿಎಂಆರ್ ಸಿಎಲ್ ನ ಪ್ರಧಾನ ವ್ಯವಸ್ಥಾಪಕ (ಹಣಕಾಸು ತೆರಿಗೆ) ಯು.ಎ. ವಸಂತ್ ರಾವ್ ಅವರು ಮಾಹಿತಿ ನೀಡಿದ್ದಾರೆ.

ವ್ಯಾವಹಾರಿಕ ಇನ್​ಕ್ಯುಬೇಶನ್ ಕೇಂದ್ರಗಳ ಸ್ಥಾಪನೆಗೆ ಚಿಂತನೆ
ಶಿಶು ಪಾಲನಾ ಕೇಂದ್ರದ ಬಳಿಕ ವ್ಯವಹಾರಿಕ ಉತ್ತೇಜನಕ್ಕಾಗಿ ನಿಲ್ದಾಣದಲ್ಲಿ ವ್ಯಾವಹಾರಿಕ ಇನ್​ಕ್ಯುಬೇಶನ್ ಕೇಂದ್ರಗಳ ಸ್ಥಾಪನೆಗೂ ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.  ನಿಲ್ದಾಣದಲ್ಲಿ ವಾಣಿಜ್ಯ ಕೇಂದ್ರಗಳನ್ನು ಸ್ಥಾಪಿಸಲು ಕೆಲ ನಿಯಮಗಳನ್ನು ಹೇರಲಾಗುತ್ತಿದ್ದು, ವಾಣಿಜ್ಯ ಕೇಂದ್ರಗಳನ್ನು ಸ್ಥಾಪಿಸುವವರು ಭಾರತದ ಕಂಪನಿ ಕಾಯಿದೆ ಮತ್ತು ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ನೋಂದಾವಣಿಯನ್ನು ಹೊಂದಿರಬೇಕು ಎಂದು ಯು.ಎ. ವಸಂತ್ ರಾವ್ ಹೇಳಿದ್ದಾರೆ.

ಮೆಟ್ರೊದ ಹೊರಾಂಗಣ ಭಾಗದಲ್ಲಿ ಹೂವು, ಕ್ರೀಡಾ ವಸ್ತುಗಳು, ರೆಸ್ಟೋರೆಂಟ್, ಹಣ ವಿನಿಮಯ ಸೇವೆ, ಬಟ್ಟೆ, ಔಷಧಾಲಯಗಳು, ಮೊಬೈಲ್ ಹಾಗೂ ತಾಜಾ ಹಣ್ಣುಗಳ ಮಾರಾಟದ ಮಳಿಗೆಗಳು ಸೇರಿದಂತೆ  ವಿವಿಧ 26 ಮಳಿಗೆಗಳಿಗೆ ಈಗಾಗಲೇ ಅನುಮತಿಯನ್ನು ನೀಡಲಾಗಿದೆ.

ಮಾರಾಟ ಮಳಿಗೆಗಾರರು ಶಾಂತಿನಗರದ ಬಿಎಂಆರ್ ಸಿಎಲ್ ಕಚೇರಿಗೆ ದಾಖಲಾತಿಗಳನ್ನು ನೀಡಬೇಕು. ಅಥವಾ ಬಿಎಂಆರ್ ಸಿಎಲ್ ನ ವೆಬ್ ಸೈಟ್ ನಲ್ಲಿ ದಾಖಲಾತಿಗಳನ್ನು ಒದಗಿಸಬೇಕು. ದಾಖಲಾತಿಗಳನ್ನು ಒದಗಿಸಬೇಕಾದ ಕಡೆಯ ದಿನಾಂಕ ಆಗಸ್ಟ್ 11 ಆಗಿರುತ್ತದೆ. ಕಡೆಯ ದಿನಾಂಕದೊಳಗಾಗಿ ದಾಖಲಾತಿಗಳನ್ನು ಒದಗಿಸಬೇಕೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com