

ಮಂಗಳೂರು: ನಾಪತ್ತೆಯಾಗಿರುವ ವಾಯುಪಡೆ ವಿಮಾನದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆ ನಿವಾಸಿ ಏಕನಾಥ ಶೆಟ್ಟಿ (49) ಅವರೂ ಇದ್ದರು. ಇದೀಗ ಅವರು ಸಂಪರ್ಕಕ್ಕೆ ಸಿಗದೆ ಇಡೀ ಕುಟುಂಬ ಕಂಗಾಲಾಗಿದೆ.
ಅವರ ಪತ್ನಿ ಜಯಂತಿ ಆಘಾತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದು,ಯಾರೊಂದಿಗೂ ಮಾತಾನಾಡುತ್ತಿಲ್ಲ. ಸೇನೆಯ ಅಧಿಕಾರಿಗಳು ಮನೆಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ, ವಿಮಾನದಲ್ಲಿದ್ದವರ ಸುಳಿವು ಲಭ್ಯ ಇಲ್ಲ ಎಂಬ ಮಾಹಿತಿಯನ್ನಷ್ಟೇ ನೀಡುತ್ತಿದ್ದಾರೆ.
ಏಕನಾಥ ಶೆಟ್ಟಿ ಅವರ ಹಿರಿಯ ಮಗಳು ಆಶಿತಾ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ. ಪುತ್ರ ಅಕ್ಷಯ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನಮ್ಮ ತಂದೆ ಸತ್ತಿಲ್ಲ, ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎಂದು ಪುತ್ರಿ ಅಶಿತಾ ಆಶಯ ವ್ಯಕ್ತ ಪಡಿಸಿದ್ದಾರೆ.
ತಂಗಿಯ ಮನೆಯ ಗೃಹ ಪ್ರವೇಶಕ್ಕೆಂದು ಇದೇ ಜುಲೈ 6ರಂದು ಊರಿಗೆ ಬಂದಿದ್ದ ಏಕನಾಥ ಅವರು 19ರಂದು ಚೆನ್ನೈಗೆ ನಿರ್ಗಮಿಸಿದ್ದರು. ತಾವು ಭಾರತೀಯ ವಾಯುಪಡೆಯ ಎಎನ್–32 ವಿಮಾನದಲ್ಲಿ ಪೋರ್ಟ್‌ಬ್ಲೇರ್‌ಗೆ ಹೋಗುವುದಾಗಿ ಏಕನಾಥ ಅವರು ಮನೆಯವರಿಗೆ ತಿಳಿಸಿದ್ದರು. ಆದರೆ ಬಳಿಕ ಕರೆ ಮಾಡಿ ತಾವು ಈ ವಿಮಾನದಲ್ಲಿ ಹೋಗುವುದಿಲ್ಲ ಎಂದಿದ್ದರು. ಮತ್ತೆ ಮನಸ್ಸು ಬದಲಾಯಿಸಿ ಅದೇ ವಿಮಾನದಲ್ಲಿ ತೆರಳಿದ್ದು ಈ ಅಪಘಾತ ಸಂಭವಿಸಿದ ಬಳಿಕ ಗೊತ್ತಾಯಿತು.
ಶುಕ್ರವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸೇನಾ ಅಧಿಕಾರಿಗಳು ಮನೆಗೆ ಕರೆ ಮಾಡಿ ವಿಮಾನ ಕಣ್ಮರೆಯಾಗಿರುವ ಬಗ್ಗೆ ತಿಳಿಸಿದರು. ಶನಿವಾರ ಮತ್ತೆ ಕರೆ ಮಾಡಿ ವಿಮಾನಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ ಎಂಬ ಮಾಹಿತಿ ನೀಡಿದರು.ಏಕನಾಥ ಶೆಟ್ಟಿ ಅವರ ತಂದೆ ಕೂಡ ಭಾರತೀಯ ಸೆನೇಯಲ್ಲಿ ಕಾರ್ಯ ನಿರ್ವಹಿಸಿದ್ದರು. ಆಗಸ್ಟ್ 17 ಕ್ಕೆ ಕಾಂಟ್ರಾಕ್ಟ್ ಕೊನೆಗೊಳ್ಳುವುದಿತ್ತು.
1985 ರಲ್ಲಿ ಏಕನಾಥ ಶೆಟ್ಟಿ ಭಾರತೀಯ ಸೇನೆಗೆ ಸೇರಿದ್ದರು. 24 ವರ್ಷಗಳ ಸೇವೆ ಸಲ್ಲಿಸಿರುವ ಅವರು ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿದ್ದರು. 2009 ರಲ್ಲಿ ನಿವೃತ್ತಿ ಹೊಂದಿದ್ದರು. ಮನೆಯಲ್ಲಿ ಸುಮ್ಮನೆ ಕೂರಲು ಇಷ್ಟವಿಲ್ಲದೇ ಮತ್ತೆ ಭದ್ರತಾ ರಕ್ಷಣಾ ದಳಕ್ಕೆ ಸೇರ್ಕೊಂಡು ಕಳೆದ ಆರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು.