ಪೊಲೀಸರ ಸಾಮೂಹಿಕ ಪ್ರತಿಭಟನೆ: ಪ್ರತಿಭಟನೆಗೆ ಮಹಿಳಾ ಪೇದೆಗಳ ಬೆಂಬಲ

ರಾಜ್ಯದ ಪೊಲೀಸ್ ಸಿಬ್ಬಂದಿಗಳು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ...
ಮಹಿಳಾ ಪೇದೆಗಳು
ಮಹಿಳಾ ಪೇದೆಗಳು

ಬೆಂಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿಗಳು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಪೊಲೀಸರ ಪ್ರತಿಭಟನೆಯನ್ನು ವಿಫಲಗೊಳಿಸಲು ಸರ್ಕಾರ ಇದೀಗ ಎಸ್ಮಾದಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಈ ಮಧ್ಯೆ ಹಲವಾರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಈ ಸಮಸ್ಯೆಗಳು ಮಾತ್ರ ಸರ್ಕಾರದ ಗಮನಕ್ಕೆ ಬರುತ್ತಿಲ್ಲ. ಸಿಬ್ಬಂದಿಗಳ ಕೊರತೆಯಿಂದಾಗಿ ನಿಗದಿತ ಸಮಯಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡಬೇಕಾಗಿದೆ. ರಜೆಯಿಲ್ಲದೆಯೆ ಕೆಲಸ ಮಾಡುತ್ತಿದ್ದೇವೆ. ರಜೆ ಹಾಗೂ ವೇತನ ಸಮಸ್ಯೆಗಳೇ ಪ್ರತಿಭಟನೆ ನಡೆಸಲು ಕಾರಣವಾಗಿದೆ ಎಂದು ಮಹಿಳಾ ಪೇದೆಗಳು ಹೇಳಿಕೊಂಡಿದ್ದಾರೆ.

ಇನ್ನು ಪಾಳಿಗಳನ್ನು ನೇಮಿಸುವ ವ್ಯವಸ್ಥೆಯಲ್ಲಿ ಕೂಡ ಸಮಸ್ಯೆಯಿದ್ದು, 12 ಗಂಟೆಗಳು ಕೆಲಸ ಮಾಡಬೇಕಾಗಿರುವ ಸಿಬ್ಬಂದಿಗಳು 16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಇದು ಸಣ್ಣ ಮಕ್ಕಳಿರುವ ಮಹಿಳಾ ಸಿಬ್ಬಂದಿಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ಕೆಲಸದ ಅವಧಿಯೇ ನಮ್ಮ ದೊಡ್ಡ ಸಮಸ್ಯೆ. ಬೆಳಿಗ್ಗೆ 9 ಗಂಟೆಗೆ ನಮ್ಮ ಕೆಲಸ ಆರಂಭವಾದರೆ ಸಂಜೆ 6.30ರವರೆಗೆ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಅತ್ಯಂತ ಮುಖ್ಯ ಕೆಲಸ ಬಂದರೆ ಮಧ್ಯರಾತ್ರಿವರೆಗೂ ಕೆಲಸ ಮುಂದುವರೆಸಬೇಕಾಗುತ್ತದೆ ಎಂದು ಮಹಿಳಾ ಪೇದೆ ಹೇಳಿದ್ದಾರೆ.

ಇನ್ನು ಎರಡು-ಮೂರು ತಿಂಗಳಿಗೊಮ್ಮೆ ಯಾವಾಗಲಾದರೂ 1 ಅಥವಾ 2 ದಿನಗಳು ರಜೆ ತೆಗೆದುಕೊಂಡರೆ ಆ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ಬೈಗುಳಗಳನ್ನು ಕೇಳಬೇಕು. ನಮ್ಮ ಮೇಲೆ ದೂರುಗಳನ್ನು ನೀಡಲಾಗುತ್ತದೆ. ಇನ್ನು ಸರ್ಕಾರ ನಮ್ಮ ವೇತನದ ಬಗ್ಗೆ ಗಮನಹರಿಸುತ್ತಿಲ್ಲ. ಪೇದೆಗಳು ತಿಂಗಳಿಗೆ ರು.12 ಸಾವಿರ ವೇತನ ಪಡೆಯುತ್ತಿದ್ದಾರೆ. ಈ ವೇತನ ಕುಟುಂಬ, ಆರೋಗ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ನೋಡಿಕೊಂಡು ಸಂಭಾಳಿಸುವುದು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com