ಮಂಡ್ಯ ಎಸ್ ಪಿಯನ್ನು ಹಿಟ್ಲರ್'ಗೆ ಹೋಲಿಸಿದ ವಜಾಗೊಂಡ ಪೇದೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರು ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆಂದು ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್ (ಡಿಎಆರ್) ಪೇದೆ ಎನ್. ರಾಮಕೃಷ್ಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರು ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆಂದು ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್ (ಡಿಎಆರ್) ಪೇದೆ ಎನ್. ರಾಮಕೃಷ್ಣ ಅವರು ಹೇಳಿದ್ದಾರೆ.

ಪೊಲೀಸರು ಸಾಮೂಹಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ರಾಜ್ಯ ಸರ್ಕಾರ ಎಸ್ಮಾ ಕಾಯ್ದೆ ಜಾರಿಗೊಳಿಸಿತ್ತು. ಎಸ್ಮಾ ಜಾರಿ ಮಾಡಿದ್ದರೂ ಯಾವುದಕ್ಕೂ ಲೆಕ್ಕಿಸದ ಪೇದೆ ರಾಮಕೃಷ್ಣ ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಹೆಚ್. ಸುಧೀರ್ ಅವರು ರಾಮಕೃಷ್ಣ ಅವರನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಜಾಗೊಂಡ ಪೇದೆ ರಾಮಕೃಷ್ಣ ಅವರು, ಹಿರಿಯ ಅಧಿಕಾರಿಗಳನ್ನು ಪ್ರಶ್ನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಅಪರಾಧವಾಗಿ ಹೋಗಿದೆ. ವಜಾ ಆದೇಶ ಕುರಿತಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್ (ಡಿಎಆರ್) ಪೇದೆಗಳು ಅನುಭವಿಸುತ್ತಿರುವ ನೋವನ್ನು ನಾನು ಅನುಭವಿಸುತ್ತಿದ್ದೇನೆ. ನಾನು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ.  ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಜಾತೀಯತೆಯೇ ಪ್ರಧಾನವಾಗಿದೆ. ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನಾಗಿರುವ ಕಾರಣ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಾಮಾಣಿಕತೆಗೆ ಎಲ್ಲಿಯೂ ಬೆಲೆಯಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಜಿಲ್ಲಾ ಎಸ್ ಪಿ ವಿರುದ್ಧ ಕಿಡಿಕಾರಿರುವ ಅವರು, ಕ್ರಿಕೆಟ್ ಅಭ್ಯಾಸ ಮಾಡಲು ಅವರಿಗೆ ಸಮಯವಿದೆ. ಅದರೆ, ಪೇದೆಗಳ ಸಮಸ್ಯೆಗಳನ್ನು ಕೇಳಲು ಅವರಿಗೆ ಸಮಯವಿಲ್ಲ. ಇಲಾಖೆಯಲ್ಲಿ ಅಧಿಕಾರಿಗಳಿಗೆ ಹಾಗೂ ಪೇದೆಗಳಿಗೆ ಪ್ರತ್ಯೇಕ ನಿಯಮಗಳಿವೆ ಎಂದು ಆರೋಪಿಸಿದ್ದಾರೆ.

ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್ (ಡಿಎಆರ್) ನಲ್ಲಿ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಸೋಮಶೇಖರ್ ವಿರುದ್ಧ ಎಸ್ ಪಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ನನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಪ್ರತಿಭಟನೆ ನಡೆಸುವುದಕ್ಕೂ 3 ದಿನಗಳಿಗೂ ಮುನ್ನ ಎಸ್ ಪಿ ಸುಧೀರ್ ಕುಮಾರ್ ರೆಡ್ಡಿಯವರನ್ನು ಭೇಟಿ ಮಾಡಲು ಯತ್ನಿಸಿದ್ದೆ. ಆದರೆ, ಭೇಟಿ ಸಾಧ್ಯವಾಗಿರಲಿಲ್ಲ. ಹೀಗಾಗಿ ನನ್ನ ಧ್ವನಿಯನ್ನು ಎತ್ತಿದ್ದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com