

ರಾಯಚೂರು: ಅಕ್ಕನ ಮಗಳ ಮೇಲಿನ ವ್ಯಾಮೋಹದಿಂದ ವೈದ್ಯ ಪತಿಯೊಬ್ಬ ತನ್ನ ಪತ್ನಿಗೆ ಎಚ್ ಐ ವಿ ಸೋಂಕು ಇರುವ ರಕ್ತವನ್ನು ಇಂಜೆಕ್ಟ್ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ವೈದ್ಯನಾಗಿದ್ದ ಪತಿ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಚ್ ಐವಿ ರಕ್ತ ಇಂಜೆಕ್ಟ್ ಮಾಡಿದ್ದಾನೆ ಎಂದು ನೊಂದ ಪತ್ನಿ ದೂರು ನೀಡಿದ್ದಾರೆ. ಈ ಕೃತ್ಯದಲ್ಲಿ ಪತಿಯ ಪತಿ ತಂದೆ, ತಾಯಿ, ಸಹೋದರಿ ಸಹಕಾರವಿದೆ ಎಂದು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪೀಡಿತೆ ದೂರು ದಾಖಲಿಸಿದ್ದಳು. ಅಲ್ಲದೇ ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ.
ಅಕ್ಕನ ಮಗಳ ಮೇಲಿನ ವ್ಯಾಮೋಹಕ್ಕೆ, ಆಕೆಯನ್ನು ಮದುವೆಯಾಗಬೇಕೆನ್ನುವ ದುರಾಸೆ ವೈದ್ಯನ ತಲೆ ಸೇರಿತ್ತು. ಪತ್ನಿ ತನ್ನನ್ನು ಬಿಟ್ಟು ಹೋಗಬೇಕೆಂಬ ಉದ್ದೇಶದಿಂದ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದ. ಆದರೆ ಆಕೆ ತನ್ನನ್ನು ಬಿಟ್ಟು ಹೋಗಲು ತಯಾರಿಲ್ಲದಾದಾಗ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ಹೇಳಲಾಗುತ್ತಿದೆ.
ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ತನಿಖಾಧಿಕಾರಿಯನ್ನು ಬದಲಾಯಿಸಬೇಕೆಂದು ನೊಂದ ಮಹಿಳೆ ಎಸ್‌ಪಿ ಚೇತನ ಸಿಂಗ್ ರಾಥೋಡ್‌ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರ ನೋವಿಗೆ ಸ್ಪಂದಿಸಿರುವ ಎಸ್‌ಪಿ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.