

ಬೆಂಗಳೂರು: ಮಾರ್ಚ್ ಅಂತ್ಯದೊಳಗೆ 505 ಕೋಟಿ ರುಪಾಯಿ ತೆರಿಗೆ ಬಾಕಿಯನ್ನು ವಸೂಲಿ ಮಾಡಿ ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವ ಕೆ.ಜೆ ಜಾರ್ಜ್ ಹೇಳಿಕೆಗೆ ಬಿಬಿಎಂಪಿ ಅಧಿಕಾರಿಗಳ ಹಾಗೂ ನೌಕರರ ಸಂಘ ವಿರೋಧ ವ್ಯಕ್ತಪಡಿಸಿದೆ.
ಕೆಜೆ ಜಾರ್ಜ್ ವಿರುದ್ಧ ಬಿಬಿಎಂಪಿ ಅಧಿಕಾರಿ ಹಾಗೂ ನೌಕರರ ಸಂಘದ ಅಧ್ಯಕ್ಷ ಆನಂದ್ ಅಸಮಾಧಾನ ವ್ಯಕ್ತಪಡಿಸಿದ್ದು, ತೆರಿಗೆ ಸಂಗ್ರಹಿಸಲು ಅಗತ್ಯ ಇರುವ ಸಿಬ್ಬಂದಿ ಭರ್ತಿ ಮಾಡುವ ಬದಲು, ಒಂದೇ ತಿಂಗಳಲ್ಲಿ 505 ಕೋಟಿ ರುಪಾಯಿ ತೆರಿಗೆ ಸಂಗ್ರಹಿಸಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಇದು ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ದಬ್ಬಾಳಿಕೆಯಾಗಿದೆ. ವಾಸ್ತವ ಅರಿತು ಸಚಿವರು ಮಾತನಾಡಬೇಕು ಎಂದು ಹೇಳಿದ್ದಾರೆ.
274 ಚದರ ಕಿಲೋಮೀಟರ್ ಇದ್ದಂತಹ ಪಾಲಿಕೆ ಈಗ 800 ಚದರ ಕಿ.ಮೀಗೆ ವಿಸ್ತರಿಸಿದೆ. ಹೀಗಾಗಿ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದ್ದು ಮೂವರು ಮಾಡುವ ಕೆಲಸಗಳನ್ನು ಒಬ್ಬರೇ ಮಾಡುವಂತಾಗಿದೆ. ಒಂದೇ ಸ್ಥಳದಲ್ಲಿ 3 ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ವರ್ಗಾವಣೆ ಮಾಡುವಂತೆ ಸಂಘದಿಂದಲೇ ಮನವಿ ಮಾಡಿಕೊಳ್ಳಲಾಗಿತ್ತು. ಅದಕ್ಕೂ ಸ್ಪಂದಿಸಿಲ್ಲ. ಇಂಥ ಇನ್ನಷ್ಟು ಕಾರಣಗಳಿಂದ ನಿರೀಕ್ಷಿತವಾಗಿ ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆನಂದ್ ಹೇಳಿದ್ದಾರೆ.