ಬೆಂಗಳೂರು: ರಾಜಭವನ ರಸ್ತೆಯ ಕ್ಯಾಪಿಟಲ್ ಹೋಟೆಲ್ ನ 5ನೇ ಮಹಡಿಯಿಂದ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ಮಹಿಳೆ ಹೋಟೆಲ್ ನ ಮಹಿಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈಸೂರು ಮೂಲದ ಸುಸನ್ನಾ(40) ಮೃತ ಮಹಿಳೆ. ಮಾರ್ಚ್ 6ರಂದು ಕ್ಯಾಪಿಟಲ್ ಹೋಟೆಲ್ ಗೆ ಬಂದಿದ್ದರು. ಹೋಟೆಲ್ ನ 2ನೇ ಮಹಡಿಯ ಕೊಠಡಿ ಸಂಖ್ಯೆ 207ರಲ್ಲಿ ಬುಧವಾರ ರಾತ್ರಿ ತಂಗಿದ್ದ ಸುಸನ್ನಾ, ಗುರುವಾರ ಬೆಳಿಗ್ಗೆ 5.45 ಸುಮಾರಿಗೆ 5ನೇ ಮಹಡಿಗೆ ಹೋಗಿ ಕೆಳಗಿ ಜಿಗಿದಿದ್ದಾರೆ.
ಕೆಳಗೆ ಬಿದ್ದಿದ್ದನ್ನು ಗಮನಿಸಿದ ಕಾವಲುಗಾರರು, ಕೂಡಲೇ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾರೆ. ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಸಾಗಿಸುತ್ತಿರಬೇಕಾದರೆ, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಸುಸನ್ನಾ ಐದು ವರ್ಷದ ಹಿಂದೆ ಪತಿಗೆ ವಿಚ್ಛೇದನ ನೀಡಿದ್ದರು. ತಂದೆ ತಾಯಿಯೂ ಇರಲಿಲ್ಲ. ಮೈಸೂರಿನ ಟೀಚರ್ಸ್ ಕಾಲೊನಿಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಕೆಲ ದಿನಗಳಿಂದ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ.