

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯನ್ನು ಕಾರ್ಯರೂಪಕ್ಕೆ ತರಲು ಮೂರು ವಾರಗಳ ಗಡವು ಕೇಳಿದ ಸರ್ಕಾರವನ್ನು ಮತ್ತೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
'ಅಪ್ಪ ಕಟ್ಟಿಸಿದ ಮನೆಯನ್ನು ಕೆಡವಿದಲ್ಲದೇ, ಹೊಸ ಮನೆಯನ್ನು ನಿರ್ಮಿಸಲು ಮರಳಿಲ್ಲ ಎಂಬ ಕಾರಣ ನೀಡಿದಂತೆ' ಎಂದು ಹೈಕೋರ್ಟ್ ಸರ್ಕಾರದ ಎಸಿಬಿ ರಚನೆಯನ್ನು ಲೇವಡಿ ಮಾಡಿದೆ.
ನ್ಯಾಯಾಮೂರ್ತಿ ಎಎನ್ ವೇಣುಗೋಪಾಲ ಅವರು, ಮಾರ್ಚ್ 19 ರಿಂದ ಲೋಕಾಯುಕ್ತದ 700ಕ್ಕೂ ಹೆಚ್ಚು ಅಧಿಕಾರಿಗಳು ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಹಾಗಾದರೆ, ಅವರಿಗೆ ನಾವು ಏಕೆ ಸಾರ್ವಜನಿಕರ ತೆರಿಗೆ ದುಡ್ಡನ್ನು ನೀಡಬೇಕು? ಈ ಮೂಲಕ ದುಡ್ಡನ್ನು ಪೋಲು ಮಾಡಿದಂತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಲೋಕಾಯುಕ್ತ ಪೊಲೀಸರ ಕಾರ್ಯ ವೈಖರಿ ವಿರುದ್ಧ ಮಂಡ್ಯದ ಡಾ.ವಿಎಲ್ ನಂದೀಶ್ ದಾಖಲಿಸಿರುವ ಕ್ರಿಮಿನಲ್ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ.ಎಎನ್ ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಎಸಿಬಿ ರಚನೆಯಲ್ಲಿ ಸರ್ಕಾರದ ನಿಧಾನಗತಿಯನ್ನು ಪ್ರಶ್ನಿಸಿದೆ. ಎರಡು ವಾರಗಳಿಂದ ಭ್ರಷ್ಟಾಚಾರ ಕೇಸ್ ದಾಖಲಾಗಿಲ್ಲ. ಪ್ರಾಸಿಖ್ಯೂಷನ್ ನಡೆಯುತ್ತಿಲ್ಲ. ಸಾಕ್ಷಿಗಳು ಸುಮ್ಮನೆ ಕೋರ್ಟ್ ಗೆ ಬಂದು ವಾಪಸ್ ಹೋಗುತ್ತಿದ್ದಾರೆ. ಪ್ರಾಸಿಕ್ಯೂಟರ್ ಗಳು ವಿಚಾರಣೆಗೆ ಹಾಜರಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದ್ದಾರೆ.
ತದ ನಂತರ ಮಾತಾನಾಡಿದ ನ್ಯಾಯಾಮೂರ್ತಿಗಳು, ಎಸಿಬಿ ರಚನೆ ಸರ್ಕಾರದ ನಿರ್ಧಾರ. ಸರ್ಕಾರದ ನೀತಿಯನ್ನು ನಾನು ಪ್ರಶ್ನಿಸುವುದಿಲ್ಲ. ಅಂತಿಮವಾಗಿ ಕೋರ್ಟ್ ಮತ್ತು ಸರ್ಕಾರದ ಉದ್ದೇಶ ಸಾರ್ವಜನಿಕರಿಗೆ ಒಳಿತನ್ನು ಬಯಸುವುದೇ ಆಗಿದೆ ಎಂದು ತಿಳಿಸಿದ್ದಾರೆ.