

ಬೆಂಗಳೂರು: ನಮ್ಮ ಮೆಟ್ರೋ ಖಂಡಿತವಾಗಿಯೂ ಬೆಂಗಳೂರಿನ ನಾಗರಿಕರ ಪ್ರಯಾಣದ ರೀತಿಯನ್ನು ಬದಲಾಯಿಸಿರಬಹುದು, ಆದರೆ ಇದು ಇನ್ನೂ ಉತ್ತಮ ಉಪ ಸೇವೆಗಳನ್ನು(Feeder service) ಒದಗಿಸಬೇಕು ಎಂಬುದು ಪ್ರಯಾಣಿಕರ ಅಭಿಮತವಾಗಿದೆ.
ಕಳೆದ ಜನವರಿಯಲ್ಲಿ ಮೆಟ್ರೋದಲ್ಲಿ ದಿನನಿತ್ಯ ಪ್ರಯಾಣ ಮಾಡುವವರ ಸಂಖ್ಯೆ 40 ಸಾವಿರದಷ್ಟಿತ್ತು. ಯಾವಾಗ ವಿಧಾನಸೌಧದಿಂದ ಸಿಟಿ ರೈಲ್ವೆ ನಿಲ್ದಾಣಕ್ಕೆ ಅಂಡರ್ ಗ್ರೌಂಡ್ ಉದ್ಘಾಟನೆಗೊಂಡಿತೋ ಪ್ರಯಾಣಿಕರ ಸಂಖ್ಯೆ ಒಂದು ಲಕ್ಷವನ್ನೂ ಮೀರಿದೆ.ಮಲ್ಲೇಶ್ವರದ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಗೆ ಮೆಟ್ರೋ ರೈಲು ಆರಂಭಗೊಂಡ ಮೇಲೆ ಪ್ರಯಾಣಿಕರ ಸಂಖ್ಯೆ ದಿನಕ್ಕೆ 3ರಿಂದ 4 ಲಕ್ಷದವರೆಗೆ ಏರುವ ನಿರೀಕ್ಷೆಯಿದೆ. ಇನ್ನೆರಡು ತಿಂಗಳಲ್ಲಿ ಆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು, ನಿತ್ಯ ಕಚೇರಿ ಕೆಲಸಗಳಿಗೆ ಹೋಗುವವರು ಮೆಟ್ರೋದಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದು ಖುಷಿಯಾಗಿದ್ದಾರೆ. ಆದರೆ ಬಿಎಂಟಿಸಿಯ ಉಪ ಸೇವೆಗಳು ಇನ್ನಷ್ಟು ಉತ್ತಮವಾಗಬೇಕು ಎಂದು ಜನ ಬಯಸುತ್ತಿದ್ದಾರೆ.
ಮೈಸೂರು ರಸ್ತೆಯ ನಿವಾಸಿಯಾದ ಶರಣ್ಯ, ನಾಯಂಡಹಳ್ಳಿಗೆ ಹೆಚ್ಚಿನ ಬಸ್ ಸೇವೆ ಸಿಗಬೇಕು ಎಂದು ಕೇಳುತ್ತಾರೆ. ಫೈ ಓವರ್ ಕೆಳಗೆ ಮೆಟ್ರೋ ಸ್ಟೇಷನ್ ನ ನಿರ್ಗಮನವಿರುವಾಗ ಅಲ್ಲಿ ಆಟೋ ಕೂಡ ಸಿಗುವುದು ಕಷ್ಟವಾಗುತ್ತದೆ. ಆಟೋ, ಬಸ್ ಹಿಡಿಯಲು ಮೂರ್ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. ನನಗೆ ಈ ಹಿಂದೆ ಪ್ರಯಾಣಿಸಲು 200 ರೂಪಾಯಿ ಬೇಕಾಗುತ್ತಿತ್ತು. ಆದರೆ ಈಗ ಮೆಟ್ರೋದಲ್ಲಿ 30 ರೂಪಾಯಿ ಸಾಕಾಗುತ್ತದೆ ಎನ್ನುತ್ತಾರೆ ಶರಣ್ಯ.
ಮೆಟ್ರೋ ರೈಲಿನ ಬಾಗಿಲುಗಳಲ್ಲಿ ಟೈಮರ್ ಬದಲು ಸೆನ್ಸರ್ ಇದ್ದರೆ ಉತ್ತಮ. ರೈಲಿನಲ್ಲಿ ತುಂಬಾ ನೂಕುನುಗ್ಗಲು ಇರುವಾಗ ಟೈಮರ್ ನಿಂದ ತೊಂದರೆಯಾಗಬಹುದು.
ನಾಯಂಡಹಳ್ಳಿಯ ಹತ್ತಿರ ಇರುವ ರಸ್ತೆ ತುಂಬಾ ಗುಂಡಿಗಳಿವೆ. ಅಂತಹ ರಸ್ತೆಯಲ್ಲಿ ಆಟೋ ಓಡಿಸುವುದು ಕಷ್ಟ ಎನ್ನುವುದು ಅವರ ಮಾತು. ಇನ್ನು ಕಳೆದ ಮೂರು ವರ್ಷಗಳಿಂದ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿರುವ ವಿದ್ಯಾರ್ಥಿ ಇಂದಿರಾ ಪ್ರಸಾದ್ ಎನ್ನುವವರು, ಬಸ್ಸು ಮತ್ತು ಆಟೋಕ್ಕಿಂತ ಮೆಟ್ರೋ ರೈಲು ಅಗ್ಗ. ಉತ್ತಮ ಉಪ ಸೇವೆಗಳನ್ನು ನೀಡಿದರೆ ಮೆಟ್ರೋ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಪೀಕ್ ಅವರ್ ಲ್ಲಿ ಹೆಚ್ಚಿನ ಬಸ್ಸುಗಳನ್ನು ಬಿಡಬೇಕು ಎನ್ನುತ್ತಾರೆ ಬಾಸಮ್ ಜಾಸಿಮ್. ಔಟರ್ ರಿಂಗ್ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ರೈಲು ಶೇಕಡಾ 50ರಷ್ಟು ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಜನರಿಗೆ ಉಪಸೇವೆ ಒದಗಿಸಲು, ಕೊನೆಯ ಮಾರ್ಗ ಸಂಪರ್ಕ ನೀಡಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಬಿಎಂಟಿಸಿ ಜೊತೆ ಹೊಸ ಮಾರ್ಗ ಯೋಜನೆ ರೂಪಿಸುತ್ತಿದೆ ಎಂದು ಬಿಎಂಆರ್ ಟಿಸಿಎಲ್ ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ರಾವ್ ತಿಳಿಸಿದ್ದಾರೆ.