ಬೆಂಗಳೂರು: ಬಡ್ಡಿ ಕಟ್ಟದಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಿಲಿಕಾನ್ ಸಿಟಿಯ ರೌಡಿ ಶೀಟರ್ ಮಹಿಳೆಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಸಾಲ ಪಡೆದಿದ್ದ ಹಣಕ್ಕೆ ಸರಿಯಾಗಿ ಬಡ್ಡಿ ಕಟ್ಟದ ಕೊತ್ತನೂರು ದಿಣ್ಣೆಯ ತಾಯಮ್ಮಅವರಿಗೆ ರೌಡಿ ಶೀಟರ್ ಯಶಸ್ವಿನಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದ್ದು, ದೂರು ದಾಖಲಿಸಿಕೊಂಡ ಸುಬ್ರಮಣ್ಯಪುರ ಪೊಲೀಸರು ಬಸವನಗುಡಿ ಮಹಿಳಾ ರೌಡಿ ಯಶಸ್ವಿನಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ತಾಯಮ್ಮ ಅವರು ಗರ್ಭಕೋಶದ ಶಸ್ತ್ರ ಚಿಕಿತ್ಸೆಗಾಗಿ ರೌಡಿ ಯಶಸ್ವಿನಿಯಿಂದ ೧ ಲಕ್ಷ ರುಪಾಯಿ ಸಾಲ ಪಡೆದಿದ್ದರು. ಆದರೆ ಸಾಲ ತೀರಿಸಲು ತಡವಾಗಿದ್ದರಿಂದ ಇಂದು ಬೆಳಿಗ್ಗೆ ತಾಯಮ್ಮ ಅವರ ಮನೆಗೆ ಬಂದ ಯಶಸ್ವಿನಿ ಸಾಲದ ಹಣ ಹಾಗೂ ಬಡ್ಡಿ ಮತ್ತು ಚಕ್ರಬಡ್ಡಿ ನೀಡುವಂತೆ ಧಮಕಿ ಹಾಕಿದ್ದಾರೆ.
ನಿಧಾನವಾಗಿ ಸಾಲ ತೀರಿಸುವುದಾಗಿ ಕೇಳಿಕೊಂಡರೂ ಒಪ್ಪದ ಯಶಸ್ವಿನಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಾಯಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.