

ಬೆಂಗಳೂರು: ನಗರದಲ್ಲಿ ಅಪಘಾತಗಳ ಅದರಲ್ಲೂ ದ್ವಿಚಕ್ರ ವಾಹನಗಳ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೆಚ್ಚಿನ ಅಪಘಾತಗಳು ಮೇಲ್ಸೇತುವೆಗಳಲ್ಲಿ ಸಂಭವಿಸುತ್ತಿವೆ. ಅಜಾಗರೂಕತೆಯ ಚಾಲನೆ ಮತ್ತು ಎಡ ಭಾಗದಿಂದ ಓವರ್ ಟೇಕ್ ಮಾಡುವುದು ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ತಜ್ಞರು ಹೇಳುತ್ತಾರೆ.
ಬೈಕಿನಲ್ಲಿ ಸವಾರಿ ಮಾಡುವವರು ಫ್ಲೈ ಓವರ್ ಗಳಲ್ಲಿ ಅಜಾಗರೂಕತೆಯಿಂದ ವೇಗವಾಗಿ ಚಲಾಯಿಸುತ್ತಾರೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಬಹುಪಾಲು ಸಂದರ್ಭಗಳಲ್ಲಿ ಹೆಚ್ಚಿನ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಅವುಗಳ ಮೇಲೆ ಭಾರೀ ಗಾತ್ರದ ವಾಹನಗಳು ಹರಿಯುತ್ತವೆ. ದ್ವಿಚಕ್ರ ವಾಹನಗಳು ಲೇನ್ ನಿಯಮಗಳನ್ನು ಪಾಲಿಸುವುದಿಲ್ಲ ಮತ್ತು ರಾಂಗ್ ಸೈಡ್ ನಿಂದ ಬೇರೆ ವಾಹನಗಳನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸುತ್ತವೆ. ಹಾಗಾದಾಗ ಅಪಘಾತಗಳು ಸಂಭವಿಸುತ್ತವೆ ಎನ್ನುತ್ತಾರೆ ತಜ್ಞರು.
ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಉಪ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಅಪಘಾತಕ್ಕೆ ಮುಖ್ಯ ಕಾರಣ ಮೇಲ್ಸೇತುವೆಗಳಲ್ಲಿ ಅತಿಯಾದ ವೇಗದಿಂದ ವಾಹನ ಚಲಾಯಿಸುವುದು. ಮೇಲ್ಸೇತುವೆಗಳಲ್ಲಿ ಸವಾರಿ ಮಾಡುವಾಗ ಜವಾಬ್ದಾರಿಯುತವಾಗಿ ವಾಹನ ಚಲಾಯಿಸಬೇಕು ಮತ್ತು ಎಡ ಭಾಗದಿಂದ ಬೇರೆ ವಾಹನವನ್ನು ಓವರ್ ಟೇಕ್ ಮಾಡುವುದನ್ನು ತಪ್ಪಿಸಬೇಕು ಎನ್ನುತ್ತಾರೆ. ಅವರು ಸಂಚಾರ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು.
ಬೆಂಗಳೂರು ನಗರದ ಕೆಲವು ಫ್ಲೈ ಓವರ್ ಗಳಲ್ಲಿ ಚೂಪಾದ ತಿರುವುಗಳಿದ್ದು, ಸವಾರರು ತಮ್ಮ ವೇಗದ ಮೇಲೆ ನಿಯಂತ್ರಣ ಹೊಂದಿರಬೇಕು. ಇದರಿಂದ ಬಹುಪಾಲು ಅಪಘಾತಗಳನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಪ್ರವೀಣ್ ಸೂದ್.
ಬೇಜವಾಬ್ದಾರಿ ಚಾಲನೆ: ರಾಜ್ಯ ಸರ್ಕಾರದ ಸಂಚಾರ ತಜ್ಞ ಮತ್ತು ಸಲಹೆಗಾರ ಎಂ.ಎನ್.ಶ್ರೀಹರಿ, ಟ್ರಾಫಿಕ್ ನಿಯಮ ಪಾಲಿಸದಿರುವುದಕ್ಕೆ ಬೈಕ್ ಸವಾರರನ್ನೇ ಹೊಣೆಯಾಗಿಸಬೇಕು. ಬೈಕ್ ಸವಾರಿ ಮಾಡುವಾಗ ಮೊಬೈಸ್ ಫೋನ್ ನಲ್ಲಿ ಮಾತನಾಡುವುದು, ಇಯರ್ ಫೋನ್ ನ್ನು ಕಿವಿಗೆ ಸಿಕ್ಕಿಸಿಕೊಂಡು ಹಾಡು ಕೇಳುವುದು ಮಾಡುತ್ತಿರುತ್ತಾರೆ. ಹೆಲ್ಮೆಟ್ ಧರಿಸಿರುವುದಿಲ್ಲ. ಹೀಗಿರುವಾಗ ಅಪಘಾತಗಳು ಸಹಜವಾಗಿ ಸಂಭವಿಸುತ್ತವೆ. ವರದಿಯೊಂದರ ಪ್ರಕಾರ, ಪ್ರತಿವರ್ಷ ಶೇಕಡಾ 42ರಿಂದ 48ರಷ್ಟು ಬೈಕ್ ಸವಾರರು ಅಜಾಗರೂಕತೆ ಚಾಲನೆಯಿಂದ ಸಾವನ್ನಪ್ಪುತ್ತಾರೆ. ಅಪಘಾತಗಳನ್ನು ತಡೆಯಲು ಒಂದೇ ಒಂದು ಪರಿಹಾರವೆಂದರೆ ಸ್ವ ಶಿಸ್ತನ್ನು ಮೈಗೂಡಿಸಿಕೊಳ್ಳುವುದು.