ಒತ್ತುವರಿದಾರರಿಗೆ ಸಂಚಕಾರ; ಬೆಂಗಳೂರಿನ ಎಲ್ಲ ಕೆರೆಗಳ ಒತ್ತುವರಿ ಸಮೀಕ್ಷೆಗೆ ಬಿಡಿಎ, ಬಿಬಿಎಂಪಿ ಸಿದ್ಧತೆ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀರ್ಪಿನ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ಸಮೀಕ್ಷೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕೆರೆ ಒತ್ತುವರಿ ಸಮೀಕ್ಷೆ (ಸಂಗ್ರಹ ಚಿತ್ರ)
ಕೆರೆ ಒತ್ತುವರಿ ಸಮೀಕ್ಷೆ (ಸಂಗ್ರಹ ಚಿತ್ರ)

ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀರ್ಪಿನ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ಸಮೀಕ್ಷೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೃಹತ್ ಬೆಂಗಳೂರು  ಮಹಾನಗರ ಪಾಲಿಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೆರೆ, ರಾಜಕಾಲುವೆಗಳ ವ್ಯಾಪ್ತಿಯ ಬಫರ್​ಜೋನ್ ಒತ್ತುವರಿ ಕುರಿತು ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ  ಅಧಿಕಾರಿಗಳಿಗೆ ಕೆರೆ ಒತ್ತುವರಿ ತನಿಖೆ ನಡೆಸಲು ನೇಮಿಸಿರುವ ಸದನ ಸಮಿತಿ ನಿರ್ದೇಶನ ನೀಡಿದೆ. ವಿಧಾನಸೌಧದಲ್ಲಿ ಮಂಗಳವಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಬಿ. ಕೋಳಿವಾಡ  ನೇತೃತ್ವದಲ್ಲಿ ಸಭೆ ಸೇರಿದ್ದ ಸಮಿತಿ ಸದಸ್ಯರು, ಬಫರ್ ಜೋನ್ ಒತ್ತುವರಿಗೆ ಸಂಬಂಧ ವರದಿ ಸ್ವೀಕರಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಇತ್ತೀಚೆಗಷ್ಟೇ ಕೆರೆಗಳ ಸುತ್ತಲಿನ 75 ಮೀಟರ್ ಜಾಗವನ್ನು ಮತ್ತು ರಾಜಾಕಾಲುವೆಗಳ ಸುತ್ತಲಿನ 50 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಹಸಿರು ನ್ಯಾಯಾಧಿಕರಣ ಮಹತ್ವದ  ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಬಿಡಿಎ, ಬಿಬಿಎಂಪಿ, ಕಂದಾಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಒಗ್ಗೂಡಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಕುರಿತು  ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದೇವೆ ಎಂದು ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸದನ ಸಮಿತಿ ಅಧ್ಯಕ್ಷ ಕೆ.ಬಿ. ಕೋಳಿವಾಡ ತಿಳಿಸಿದರು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ 10,775 ಎಕರೆ ಕೆರೆ ಹಾಗೂ ರಾಜಕಾಲುವೆ ಜಾಗ ಒತ್ತುವರಿಯಾಗಿದೆ. ಬೆಂಗಳೂರು ನಗರದಲ್ಲಿ 837 ಕೆರೆ, ಗ್ರಾಮಾಂತರದಲ್ಲಿ 710  ಕೆರೆಗಳು ಬಿಲ್ಡರ್​ಗಳ ಪಾಲಾಗಿವೆ. ಸರ್ಕಾರಿ ಸಂಸ್ಥೆಗಳಿಂದ 3,250 ಎಕರೆ, ಖಾಸಗಿ ಬಿಲ್ಡರ್​ಗಳಿಂದ 7,530 ಎಕರೆ ಕೆರೆ ಹಾಗೂ ರಾಜಕಾಲುವೆ ಒತ್ತುವರಿಯಾಗಿವೆ ಎಂದು ಕೆ.ಬಿ. ಕೋಳಿವಾಡ  ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕೆರೆ ಒತ್ತುವರಿ ತನಿಖೆ ನಡೆಸುತ್ತಿರುವ ಸದನ ಸಮಿತಿ ಅವಧಿಯನ್ನು ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈಗ ಬಫರ್​ಜೋನ್ ಒತ್ತುವರಿ ಸಮಸ್ಯೆ  ಎದುರಾಗಿದ್ದು, ಈ ಕುರಿತು ಶೀಘ್ರ ತನಿಖೆ ನಡೆಸುತ್ತೇವೆ ಎಂದರು.

ಬಫರ್ ಜೋನ್​ನಲ್ಲಿ ಈಗಾಗಲೇ ನಿರ್ವಿುಸಿರುವ ಕಟ್ಟಡಗಳ ಕುರಿತು ಏನು ಮಾಡಬೇಕೆಂಬುದನ್ನು ವರದಿ ಬಂದ ನಂತರ ನಿರ್ಧರಿಸುತ್ತೇವೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಕಾಮಗಾರಿ  ನಡೆಯದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಬಫರ್​ಜೋನ್ ಒತ್ತುವರಿ ಆಗದಂತೆ ಎಚ್ಚರವಹಿಸಲು ಆದೇಶಿಸಲಾಗಿದೆ ಎಂದು   ಕೋಳಿವಾಡ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com