ಸಿಎಂ ಸಿದ್ದು ಸಿಟಿ ರೌಂಡ್ಸ್ ನಿಂದ ಬೆಂಗಳೂರಿಗರಿಗೆ "ಟ್ರಾಫಿಕ್ ಜಾಮ್ ಭಾಗ್ಯ"

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯದಂತಹ ಹಲವು ಭಾಗ್ಯಗಳನ್ನು ನೀಡಿದ್ದಾರೆ. ಆದರೆ, ಇದೀಗ ತಮ್ಮ ಸಿಟಿ ರೌಂಡ್ಸ್ ಮೂಲಕ...
ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ಹಿನ್ನೆಲೆಯಲ್ಲಿ ಕೆ.ಆರ್. ಪುರಂನಲ್ಲಿರುವ ರಸ್ತೆಯ ಒಂದು ಭಾಗವನ್ನು ವಾಹನ ಮುಕ್ತವಾಗಿ ಮಾಡಿರುವ ಚಿತ್ರ
ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ಹಿನ್ನೆಲೆಯಲ್ಲಿ ಕೆ.ಆರ್. ಪುರಂನಲ್ಲಿರುವ ರಸ್ತೆಯ ಒಂದು ಭಾಗವನ್ನು ವಾಹನ ಮುಕ್ತವಾಗಿ ಮಾಡಿರುವ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯದಂತಹ ಹಲವು ಭಾಗ್ಯಗಳನ್ನು ನೀಡಿದ್ದಾರೆ. ಆದರೆ, ಇದೀಗ ತಮ್ಮ ಸಿಟಿ ರೌಂಡ್ಸ್ ಮೂಲಕ ಜನರಿಗೆ ಮತ್ತೊಂದು ಟ್ರಾಫಿಕ್ ಜಾಮ್ ಭಾಗ್ಯವನ್ನು ನೀಡಿದ್ದು, ಜನರ ಕಣ್ಣು ಕೆಂಪಗಾಗುವಂತೆ ಮಾಡಿದೆ.
    
ಹಲವು ದಿನಗಳ ನಂತರ ಸಿದ್ದರಾಮಯ್ಯ ಅವರು ನಿನ್ನೆ ನಗರ ಪ್ರದಕ್ಷಿಣೆ ನಡೆಸಿದ್ದರು. ಪ್ರತೀ ಬಾರಿಯಂತೆ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆಗೆ ಹೊರಟಾಗ ಅವರ ಬೆಂಗಾವಲು ಪಡೆಯ ವಾಹನಗಳು ಹೋಗುತ್ತವೆ. ಇದರಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಇನ್ನಿತರೆ ಉನ್ನತಾಧಿಕಾರಿಗಳು ಹಾಗೂ ಸಚಿವರೂ ಕೂಡ ಅವರ ಜೊತೆಗೆ ಸಾಗುತ್ತಾರೆ.

ಇದರೊಂದಿಗೆ ಮಾಧ್ಯಮಗಳ ವಾಹನಗಳು ಹಾಗೂ ಪಕ್ಷದ ಕಾರ್ಯಕರ್ತರು ಕೂಡ ತಮ್ಮ ವಾಹನಗಳಲ್ಲಿ ತೆರಳುತ್ತಿರುತ್ತಾರೆ. ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಬೆಳಿಗ್ಗೆ 10 ಗಂಟೆಗೆ ಆರಂಭವಾದರೆ 3 ತಾಸುಗಳ ಕಾಲ ನಡೆಯುತ್ತದೆ.

ಹೀಗಾಗಿ ಮಂತ್ರಿಗಳು ರಸ್ತೆಯಲ್ಲಿ ಚಲಿಸುವ ಕಾರಣ ಯಾವುದೇ ಸಮಸ್ಯೆಗಳು ಎದುರಾಗಬಾರದೆಂಬ ಕಾರಣಕ್ಕೆ ಸಂಚಾರಿ ಪೊಲೀಸರು ವಾಹನ ಮುಕ್ತ ರಸ್ತೆಯಾಗಿಸಿ ಸಂಚಾರ ಸುಗಮವಾಗುವಂತೆ ಮಾಡುತ್ತಾರೆ. ಆದರೆ, ಮಂತ್ರಿಗಳ ಈ ಸುಗಮ ಸಂಚಾರವೇ ಇದೀಗ ಸಾರ್ವಜನಿಕರ ಕಣ್ಣು ಕೆಂಪಾಗುವಂತೆ ಮಾಡಿದೆ.

ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ಗೃಹ ಕಚೇರಿ ಕೃಷ್ಣದಿಂದ ಆರಂಭವಾಗುತ್ತಿದ್ದಂತೆ ಸಂಚಾರ ಪೊಲೀಸರು ಮೆಜೆಸ್ಟಿಕ್ ನಲ್ಲಿರುವ ಸುಬೇದಾರ್ ಛತ್ರಾಮ್ ರಸ್ತೆಯನ್ನು ತಡೆ ಹಿಡಿಯುತ್ತಾರೆ. ಈ ರಸ್ತೆ ಕೆಂಪೇಗೌಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ರಸ್ತೆಗಳ ಸಂಪರ್ಕವನ್ನು ಹೊಂದಿರುವುದರಿಂದ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯುಂಟಾಗುತ್ತದೆ. ಇದಲ್ಲದೆ, ರಿಂಗ್ ರೋಡ್, ಕೆ.ಆರ್ ಪುರಂ ಹಾಗೂ ಹೆಚ್ ಎಸ್ಆರ್ ಲೇಜೌಟ್ ರಸ್ತೆಗಳ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ಜನರು ಸಮಯಕ್ಕೆ ಬರುವ ಬಸ್ ಹಾಗೂ ರೈಲುಗಳನ್ನೇರಲು ತೊಂದರೆಯನ್ನನುಭವಿಸುತ್ತಿದ್ದಾರೆ.

ಇನ್ನು ಈ ಟ್ರಾಫಿಕ್ ಸಮಸ್ಯೆ ಕುರಿತಂತೆ ಪೇದೆಯೊಬ್ಬರು ಮಾತನಾಡಿದ್ದು, ಹೆಚ್ಎಸ್ಆರ್ ಲೇ ಔಟ್ ನಲ್ಲಿ ನಿಂತಿದ್ದ ದ್ವಿಚಕ್ರ ಸವಾರನೊಬ್ಬ ನನ್ನನ್ನು ಪ್ರಶ್ನೆಯೊಂದನ್ನು ಕೇಳಿದ್ದ. ಮುಖ್ಯಮಂತ್ರಿಗಳು ಹೋಗಲು ಸುಲಭವಾಗಲೆಂದು ಸಾರ್ವಜನಿಕರಿಗೇಕೆ ತೊಂದರೆ ನೀಡುತ್ತಿದ್ದೀರಿ ಎಂದು ಕೇಳಿದ್ದ, ಹೋಗಿ ಮುಖ್ಯಮಂತ್ರಿಗಳನ್ನೇ ಕೇಳಿ ಎಂದಿದ್ದೆ ಎಂದು ಹೇಳಿದ್ದಾರೆ.

ಟ್ರಾಫಿಕ್ ಜಾಮ್: ಸಾಮಾಜಿಕ ಜಾಲತಾಣದಲ್ಲಿಯೂ ಹಲವು ಟೀಕೆ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆಯಿಂದಾಗಿ ನಗರದಲ್ಲಿ ಉಂಟಾಗುತ್ತಿರುವ ಸಂಚಾರ ಸಮಸ್ಯೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿಯೂ ಹಲವಾರು ಟೀಕೆಗಳು ವ್ಯಕ್ತವಾಗುತ್ತಿವೆ.

ಫೇಸ್ ಬುಕ್ ನಲ್ಲಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್ ನಲ್ಲಿಯೂ ಈ ಕುರಿತಂತೆ 74 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ದಯವಿಟ್ಟು ಮುಖ್ಯಮಂತ್ರಿಗಳನ್ನು ಕೇಳಿ ಬೇರೆಯವರಿಗೆ ನೋವನ್ನು ನೀಡುವ ಬದಲು ಒಮ್ಮೆ ಸಿದ್ದರಾಮಯ್ಯ ಅವರು ಮಾರುವೇಷ ಧರಿಸಿ ದ್ವಿಚಕ್ರವಾಹನದಲ್ಲಿ ಸವಾರಿ ಮಾಡಿ ಜನರ ಸಂಕಷ್ಟವನ್ನು ಅರಿಯಲಿ ಎಂದು ದೀಪಕ್ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಟ್ರಾಫಿಕ್ ಸಮಸ್ಯೆ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದ್ದು, ಈ ಬಾರಿ ನಗರ ಪ್ರದಕ್ಷಿಣೆಯನ್ನು ರಸ್ತೆ ಮಾರ್ಗದ ಮೂಲಕ ಮಾಡುವುದನ್ನು ಬಿಟ್ಟು ಪರ್ಯಾಯ ಮಾರ್ಗವಾಗಿ ಮೆಟ್ರೋ ರೈಲು ಮಾರ್ಗವನ್ನು ಬಳಸಿಕೊಳ್ಳಲು ಮುಂದಾಗಿದ್ದರು. ಇದರಂತೆ ಬೈಯಪ್ಪನಹಳ್ಳಿ ಮೂಲಕ ಮೆಟ್ರೋವನ್ನು ಹತ್ತಿದ್ದ ಅವರು ವಿಧಾನಸೌಧದ ಬಳಿ ಬಂದು ಇಳಿದಿದ್ದರು.

ಮುಖ್ಯಮಂತ್ರಿಗಳ ಮೆಟ್ರೋ ಸಂಚಾರ ಕುರಿತಂತೆ ಮಾತನಾಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಅವರು, ಮುಖ್ಯಮಂತ್ರಿಗಳಿಗಾಗಿ ಯಾವುದೇ ವಿಶೇಷ ರೈಲನ್ನು ನಿಯೋಜಿಸಲಾಗಿರಲಿಲ್ಲ. ಅವರು ಸಾಮಾನ್ಯವಾಗಿಯೇ ಜನರೊಂದಿಗೆ ರೈಲನ್ನು ಹತ್ತಿದ್ದರು. ಮೆಟ್ರೋ ರೈಲು ದೈನಂದಿನ ಸಮಯದಂತೆಯೇ ಚಲಿಸಿತ್ತು ಎಂದು ಹೇಳಿದ್ದಾರೆ.

ಇನ್ನು ನಗರದ ರಸ್ತೆ ಸಮಸ್ಯೆಗಳು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಯೋಜನೆಯಂತೆ 2 ಹಂತದಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಮೊದಲನೇ ಹಂತದ ಕಾಮಗಾರಿಯಲ್ಲಿ 50 ರಸ್ತೆಗಳಿಗೆ ಕಾಂಕ್ರೀಟ್ ಗಳನ್ನು ಹಾಕಲಾಗುತ್ತಿದೆ. ಇದರಲ್ಲಿ 9 ರಸ್ತೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. 7 ರಸ್ತೆಗಳ ಅಭಿವೃದ್ಧಿ ಈಗಾಗಲೇ ಪೂರ್ಣಗೊಂಡಿದೆ.

ಮೊದಲನೇ ಹಂತದ ಕಾಮಗಾರಿ ಕೆಲಸ 2016 ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 2ನೇ ಹಂತದ ಕಾಮಗಾರಿ ಕೆಲಸಗಳು 2017ರ ಜನವರಿ ತಿಂಗಳಲ್ಲಿ ಅಂತಿಮಗೊಳ್ಳಲಿದೆ. ಇನ್ನು ಪಾದಚಾರಿ ಮಾರ್ಗಗಳ ಸಮಸ್ಯೆಗಳು ಕೂಡ ಗಮನಕ್ಕೆ ಬಂದಿದ್ದು, ಈ ಸಮಸ್ಯೆಗಳು 2ನೇ ಹಂತದ ಯೋಜನೆಯಲ್ಲಿ ಬಗೆಹರಿಯಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com