

ಬೆಂಗಳೂರು: ಬಸ್ ಎಷ್ಟೊತ್ತಿಗೆ ಬರುತ್ತೇ, ಈ ಸಮಯದಲ್ಲಿ ಬಸ್ ಬರುತ್ತದೆಯೋ ಇಲ್ಲವೋ ಎಂದು ಪ್ರತೀ ನಿತ್ಯ ಜನರು ಬಸ್ ನಿಲ್ದಾಣದಲ್ಲಿ ನಿಂತು ಅಕ್ಕ ಪಕ್ಕದವರನ್ನು ಕೇಳುವುದು ಹಾಗೂ ಟಿಸಿ ಗಳ ಬಳಿ ಹೋಗಿ ವಿಚಾರಿಸುವುದನ್ನು ಪ್ರತೀ ನಿತ್ಯ ನೋಡುತ್ತಿರುತ್ತೇವೆ. ಆದರೆ, ಇಂತಹ ಸಮಸ್ಯೆಗಳು ಇನ್ನು ಮುಂದೆ ಎದುರಾಗುವುದಿಲ್ಲ.
ಪ್ರಯಾಣಿಕರ ಸಹಾಯಕ್ಕಾಗಿ ಇದೀಗ ಬಿಎಂಟಿಸಿ ಕೂಡ ಅಪ್ ಗ್ರೇಡ್ ಆಗಿದ್ದು, ಬಿಎಂಟಿಸಿ ಬಸ್ ಗಳ ಸಂಚಾರದ ಕುರಿತು ಪ್ರಯಾಣಿಕರಿಗೆ ಸಮಗ್ರ ಮಾಹಿತಿ ಒದಗಿಸುವ ಹೊಸ ಆ್ಯಪ್ ಒಂದನ್ನು ಇದೀಗ ಬಿಡುಗಡೆ ಮಾಡಿದೆ.
ಪ್ರಯಾಣಿಕರಿಗೆ ಸಮಗ್ರ ಮಾಹಿತಿ ಒದಗಿಸುವ ಸಲುವಾಗಿ ಬಿಎಂಟಿಸಿ ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್-ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ)ನ್ನು ಬಿಡುಗಡೆ ಮಾಡಿದ್ದು, ಆ್ಯಪ್ ನಿಂದ ಪ್ರಯಾಣಿಕರು ಬಿಎಂಟಿಸಿ ಬಸ್ ಎಲ್ಲಿದೆ, ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ಬರಲಿದೆ ಹಾಗೂ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದೆಯೇ ಎಂಬೆಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ.
ನಿನ್ನೆಯಷ್ಟೇ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯ ಒಂದನೇ ಮಹಡಿಯಲ್ಲಿ ಸ್ಥಾಪಿಸಲಾಗಿರುವ ಐಟಿಎಸ್ ನಿಯಂತ್ರಣಾ ಕೊಠಡಿಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಿಗೆ ಸಂಸ್ಥೆಗಳು ಪ್ರಯಾಣಿಕರಿಗೆ ಉತ್ತರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮೊದಲ ಆದ್ಯತೆಯನ್ನು ನೀಡಬೇಕಿದೆ ಎಂದು ಹೇಳಿದ್ದಾರೆ.
ನಗರದೊಳಗೆ ಮತ್ತು ಹೊರವಲಯದಲ್ಲಿ 6404 ಬಿಎಂಟಿಸಿ ಬಸ್ ಗಳು ಕಾರ್ಯಾಚರಣೆಗೊಳ್ಳುತ್ತಿದ್ದು, ಪ್ರತಿ ದಿನ 51 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಮೆಟ್ರೋ ಆರಂಭವಾದ ಬಳಿಕ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಬದಲಿಗೆ ದ್ವಿಚಕ್ರ ವಾಹನ, ಆಟೋ, ಕಾರುಗಳಲ್ಲಿ ಸಂಚರಿಸುತ್ತಿರುವ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ಮೊಬೈಲ್ ನಲ್ಲಿರುವ ವೇಳಾಪಟ್ಟಿಯ ಮೂಲಕ ಪ್ರಯಾಣಿಕರಿಗೆ ಬಿಎಂಟಿಸಿ ಬಸ್ ಗಳ ಕುರಿತ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ರಸ್ತೆ ಮಾಹಿತಿ, ಬಸ್ ಟಿಕೆಟ್ ದರ ಹಾಗೂ ತಮ್ಮ ನಿಗದಿತ ಸ್ಥಳಕ್ಕೆ ಬಸ್ ಎಷ್ಟು ಹೊತ್ತಿಗೆ ತಲುಪಲಿದೆ ಎಂಬುದನ್ನು ತಿಳಿಯಬಹುದು. ಅಲ್ಲದೆ, ನಿಮ್ಮ ಹತ್ತಿರ ಬಸ್ ನಿಲ್ದಾಣ ಎಲ್ಲಿದೆ ಎಂಬುದನ್ನು ಆ್ಯಪ್ ಮೂಲಕ ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ.
ಸ್ಮಾರ್ಟ್ ಕಾರ್ಡ್ ಗೆ ಚಿಂತನೆ
ಇನ್ನು ಜುಲೈ ತಿಂಗಳಿನಲ್ಲಿ ಸ್ಮಾರ್ಟ್ ಕಾರ್ಡ್ ನ್ನು ಜಾರಿಗೆ ತರಲು ಬಿಎಂಟಿಸಿ ಚಿಂತನೆ ನಡೆಸಿದ್ದು, ಸ್ಮಾರ್ಟ್ ಕಾರ್ಡ್ ಮೂಲಕ ಪ್ರಯಾಣಿಕರು ಹಣವಿಲ್ಲದೆ ಪ್ರಯಾಣ ಮಾಡುವಂತಹ ಸೌಲಭ್ಯವನ್ನು ಒದಗಿಸಲು ಯೋಜನೆ ರೂಪಿಸಿದೆ.
ಪ್ರಯಾಣ ನಡೆಸಲು ಪ್ರಯಾಣಿಕರಿಗೆ ಪ್ರೀಪೇಡ್ ಕಾರ್ಡ್ ಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ. ಪ್ರೀಪೇಡ್ ಕಾರ್ಡ್ ಮೂಲಕ ಪ್ರಯಾಣಿಕರು ಹಣವನ್ನು ರೀಚಾರ್ಜ್ ಮಾಡಿಕೊಂಡು ಎಲ್ಲಿ ಬೇಕಾದರೂ ಪ್ರಯಾಣ ನಡೆಸಬಹುದು. ಇದನ್ನೇ ಕೆಲವು ಬದಲಾವಣೆ ಮೂಲಕ ಮೆಟ್ರೋ ಸಂಚಾರದಲ್ಲಿ ಬಳಸಿಕೊಳ್ಳಬಹುದು ಎಂದು ಬಿಎಂಟಿಸಿ ನಿರ್ವಾಹಕ ನಿರ್ದೇಶಕ ಎಕ್ರೂಪ್ ಕೌರ್ ಅವರು ಹೇಳಿದ್ದಾರೆ.