
ಬೆಂಗಳೂರು; ಉದ್ಯಮಿ ಸುರೇಂದ್ರಕುಮಾರ್ ಪರುಚೂರಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಪರಿಚಯಸ್ಥರೇ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸುರೇಂದ್ರ ಕುಮಾರ್ ಅವರ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಹಲವು ಮಾಹಿತಿ ಕಲೆ ಹಾಕಿದ್ದಾರೆ. ಭಾನುವಾರ ರಾತ್ರಿ ಸಂಜಯನಗರದ ಮನೆಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಸುರೇಂದ್ರ ಕುಮಾರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದರು.
ಹಂತಕರ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಗುಂಟೂರಿಗೆ ಹೋಗಿದ್ದರೆ, ಮತ್ತೊಂದು ತಂಡ ಮಥುರಾಗೆ ತೆರಳಿದೆ. ಇನ್ನುಳಿದ ತಂಡಗಳು ನಗರದಲ್ಲೇ ಇರುವ ಮೃತರ ಸ್ನೇಹಿತರು, ಸಂಬಂಧಿಗಳು ಹಾಗೂ ಅವರ ಒಡೆತನದ ಗ್ಲೋಬಲ್ ಸೆಕ್ಯುರಿಟಿ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದ 30 ಭದ್ರತಾ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿವೆ. ಅದೇ ರೀತಿ ಸುರೇಂದ್ರ ಅವರ ಒಡೆತನದ ಪರುಚೂರಿ ಗ್ಲೋಬಲ್ ಫೌಂಡೇಷನ್ ಕಂಪೆನಿಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಅವರನ್ನು ಮಥುರಾದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಕಂಪೆನಿಯ ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಕಪಿಲ್ ವಿರುದ್ಧ ಸುರೇಂದ್ರ ಆರ್.ಟಿ. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಉತ್ತರ ಪ್ರದೇಶದ ಸ್ಥಳೀಯ ನ್ಯಾಯಾಲಯದಲ್ಲಿ 12 ಮೊಕದ್ದಮೆಗಳನ್ನು ಹೂಡಿದ್ದರು.8 ತಿಂಗಳ ಹಿಂದೆ ಕಪಿಲ್ ಸುರೇಂದ್ರ ಕುಮಾರ್ ಅವರಿಗೆ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರಿಗೆ ಹಂತಕರ ಬಗ್ಗೆ ಕೆಲವು ಸುಳಿವು ಸಿಕ್ಕಿದ್ದು, ಈಗಲೇ ಅದನ್ನು ಬಹಿರಂಗ ಪಡಿಸಲಾಗದು ಎಂದು ಹೇಳಿದ್ದಾರೆ.
Advertisement