ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ವಿರುದ್ಧ ಸ್ಟೇಟಸ್ ಹಾಕಿದ ಪೊಲೀಸ್ ಗೆ ಸರ್ಕಾರದ ನೋಟಿಸ್!

ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ವಿರುದ್ಧ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರಿಗೆ ರಾಜ್ಯಸರ್ಕಾರ ವಿವರಣೆ ಕೋರಿ ನೋಟಿಸ್ ನೀಡಿದೆ.
ಫೇಸ್ ಬುಕ್ ಸ್ಟೇಟಸ್ ಚಿತ್ರ
ಫೇಸ್ ಬುಕ್ ಸ್ಟೇಟಸ್ ಚಿತ್ರ

ಬೆಂಗಳೂರು: ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ವಿರುದ್ಧ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರಿಗೆ ರಾಜ್ಯಸರ್ಕಾರ ವಿವರಣೆ ಕೋರಿ ನೋಟಿಸ್ ನೀಡಿದೆ.

ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್ ಎಸ್ ರಾಘವೇಂದ್ರ ರಾಮಣ್ಣ ಎಂಬುವವರಿಗೆ ಗೃಹ ಇಲಾಖೆಯಿಂದ ನೋಟಿಸ್ ಬಂದಿದ್ದು, ತಮ್ಮ ವಿವಾದಾತ್ಮಕ ಫೇಸ್ ಬುಕ್ ಸ್ಟೇಟಸ್ ಕುರಿತಂತೆ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ.

ಪೊಲೀಸ್ ಅಧಿಕಾರಿ ರಾಘವೇಂಧ್ರ ಅವರು ನವೆಂಬರ್ 12ರ ರಾತ್ರಿ 8.35ರಲ್ಲಿ ತಮ್ಮ ಫೇಸ್ ಬುಕ್ ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ಯೋಜನೆ ಸಂಬಂಧ ಸ್ಟೇಟಸ್ ಹಾಕಿಕೊಂಡಿದ್ದರು. ಈ ವಿಚಾರ ಗೃಹ ಸಚಿವ ಜಿ ಪರಮೇಶ್ವರ ಅವರ ಗಮನಕ್ಕೆ ಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಈ ಸಂಬಂಧ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿ ರಾಘವೇಂದ್ರ ಅವರಿಗೆ ನೋಟಿಸ್ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ಸರ್ಕಾರದ ಯೋಜನೆಗಳನ್ನು ಮತ್ತು ನಿರ್ಧಾರಗಳನ್ನು ಟೀಕೆ ಮಾಡಲು ಸರ್ಕಾರಿ ಅಧಿಕಾರಿ/ನೌಕರರಿಗೆ ಅವಕಾಶವಿಲ್ಲ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದ್ದು, ಇದರಲ್ಲಿ ಅಶಿಸ್ತು ತೋರಿದರೆ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ ಟ್ರಾಫಿಕ್ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಬೆಂಗಳೂರಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮೇಲ್ಸೇತುವೆ ನಿರ್ಮಾಣದಿಂದ ಸುಮಾರು 800ಕ್ಕೂಹೆಚ್ಚು ಮರಗಳ ಮಾರಣ ಹೋಮ ನಡೆಯಲಿದ್ದು, ಬೆಂಗಳೂರಿನ ಸೌಂದರ್ಯವೇ ಹಾಳಾಗಿ ಹೋಗುತ್ತದೆ. ಹೀಗಾಗಿ ಸ್ಟೀಲ್ ಬ್ರಿಡ್ಜ್ ಬೇಡ ಎಂದು ನಟ ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ. ಪ್ರಸ್ತುತ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com