ಬೆಳ್ಳಂದೂರು ಕಟ್ಟಡ ಕುಸಿತ ಪ್ರಕರಣ: ಎಂಜಿನಿಯರೇ ಇಲ್ಲದ ಕಟ್ಟಡಕ್ಕೆ ಗುಣಮಟ್ಟ ಪ್ರಮಾಣ ಪತ್ರ ನೀಡಿದ ಬಿಬಿಎಂಪಿ!

ಬೆಳ್ಳಂದೂರು ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಎದ್ದು ಕಾಣುತ್ತಿದ್ದು, ಎಂಜಿನಿಯರೇ ಇಲ್ಲದ ಕಟ್ಟಡಕ್ಕೆ ಗುಣಮಟ್ಟ ಪ್ರಮಾಣ ಪತ್ರ ನೀಡುವ ಮೂಲಕ ದುರಂತಕ್ಕೆ ಪರೋಕ್ಷ ಕಾರಣವಾಗಿದ್ದಾರೆ.
ನಿರ್ಮಾಣ ಹಂತದ ಕಟ್ಟಡ ಕುಸಿತ
ನಿರ್ಮಾಣ ಹಂತದ ಕಟ್ಟಡ ಕುಸಿತ
Updated on

ಬೆಂಗಳೂರು: ಬೆಳ್ಳಂದೂರು ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಎದ್ದು ಕಾಣುತ್ತಿದ್ದು, ಎಂಜಿನಿಯರೇ ಇಲ್ಲದ ಕಟ್ಟಡಕ್ಕೆ ಗುಣಮಟ್ಟ ಪ್ರಮಾಣ ಪತ್ರ ನೀಡುವ ಮೂಲಕ ದುರಂತಕ್ಕೆ ಪರೋಕ್ಷ ಕಾರಣವಾಗಿದ್ದಾರೆ.

ಕಟ್ಟಡಕ್ಕೆ ಮುಖ್ಯ ಎಂಜಿನಿಯರ್ ಇಲ್ಲದೇ ಹೋದರೂ ಬಿಬಿಎಂಪಿ ಅಧಿಕಾರಿಗಳು ಕಟ್ಟಡಕ್ಕೆ ಗುಣಮಟ್ಟ ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕಟ್ಟಡಕ್ಕೆ ಯಾವುದೇ ರೀತಿಯ ಎಂಜಿನಿಯರ್ ರನ್ನು ಕಟ್ಟಡದ ಮಾಲೀಕರು ಹೊಂದಿರಲಿಲ್ಲ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಬಳಸಿರುವ ಮರಳು ಮತ್ತು ಸಿಮೆಂಟ್ ನ ಗುಣಮಟ್ಟ ಪರೀಕ್ಷೆಗೊಳಪಟ್ಟಿಲ್ಲ. ತಜ್ಞರ ತಂಡ ಮರಳು ಮತ್ತು ಸಿಮೆಂಟ್ ಅನ್ನು ಪರೀಕ್ಷೆಗೊಳಪಡಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಮುಖ್ಯ ಎಂಜಿನಿಯರ್ ಇಲ್ಲದೆಯೇ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗಿದೆ. ಕಟ್ಟಡವನ್ನು ಆರ್ ಕೆ ಆಸೋಸಿಯೇಟ್ಸ್ ಸಂಸ್ಥೆ ವಿನ್ಯಾಸ ಮಾಡಿದ್ದು, ಸಂಸ್ಥೆಯ 6 ಮಾಲೀಕರು ಇದೀಗ ನಾಪತ್ತೆಯಾಗಿದ್ದಾರೆ. ಅವರ ವಿಚಾರಣೆಗಾಗಿ ಶೋಧ ನಡೆಸಲಾಗುತ್ತಿದೆ. ಇನ್ನು ಕಟ್ಟಡ ವಿನ್ಯಾಸವನ್ನು ಸರಿಯಾಗಿ ಪರೀಕ್ಷಿಸದೇ ಪ್ರಮಾಣ ಪತ್ರ ನೀಡಿದ ಸ್ಥಳೀಯ ಪಾಲಿಕೆ ಎಇ ರಾಮಚಂದ್ರಪ್ಪ, ಎಡಬ್ಲ್ಯೂ ಕೋದಂಡ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಅವಶೇಷಗಳಡಿ ಸಿಲುಕಿರುವವರ ಶೋಧಕ್ಕಾಗಿ ವಿಕ್ಟಿಮ್ ಡಿಟಕ್ಟರ್ ಸಾಧನ ಬಳಕೆ
ಇನ್ನು ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಎನ್ ಡಿಆರ್ ಎಫ್ ಸಿಬ್ಬಂದಿಗಳು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಅಲ್ಲದೆ ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ಶೋಧಿಸಲು ಅತ್ಯಾಧುನಿಕ ವಿಕ್ಟಿಮ್ ಡಿಟಕ್ಟರ್ ಸಾಧನ ಬಳಕೆ ಮಾಡಲಾಗುತ್ತಿದೆ.

ಬಾವಿ ಮುಚ್ಚಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇ ದುರಂತಕ್ಕೆ ಕಾರಣ?
ಇನ್ನು ಸ್ಥಳೀಯ ನಿವಾಸಿಗಳು ಹೇಳುವಂತೆ ಕಟ್ಟಡದ ಕೆಳಗೆ ಹಳೆಯ ಒಂದು ಬಾವಿ ಇತ್ತು. ಆದರೆ ಬಿಲ್ಡರ್ ಗಳು ಈ ಬಾವಿಯನ್ನು ಮುಚ್ಚಿ ಅಲ್ಲೇ ಕಟ್ಟಡ ನಿರ್ಮಾಣ ಮಾಡಿದರು. ಕಟ್ಟಡದ ಭಾರಕ್ಕೆ ಬಾವಿ ಒಡೆದಿದ್ದು, ಕಟ್ಟಡದ ಕೆಳ ಭಾಗ ಕೂಡ ಕುಸಿದಿದೆ. ಹೀಗಾಗಿ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com