ದರ್ಶನ್ ಮನೆ, ಎಸ್ಎಸ್ಎಸ್ ಆಸ್ಪತ್ರೆ ತೆರವುಗೊಳಿಸಲ್ಲ, ಸರ್ಕಾರಿ ಕಚೇರಿ ಮಾಡುತ್ತೇವೆ: ಡಿಸಿ ಶಂಕರ್

ತೀವ್ರ ವಿವಾದ ಸೃಷ್ಟಿಸಿದ್ದ ನಟ ದರ್ಶನ್ ಮನೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಜಿಲ್ಲಾಡಳಿತ ದಿಟ್ಟ ನಿರ್ಧಾರ ಕೈಗೊಂಡಿದ್ದು, ಅಕ್ರಮ ಜಾಗದಲ್ಲಿರುವ ದರ್ಶನ್ ನಿವಾಸ, ಎಸ್ ಎಸ್ ಆಸ್ಪತ್ರೆ ಸೇರಿದಂತೆ ಒಟ್ಟು 69 ನಿವೇಶನಗಳನ್ನು ತೆರವುಗೊಳಿಸುವುದಾಗಿ ತಿಳಿಸಿದೆ.
ನಟ ದರ್ಶನ್ ನಿವಾಸ (ಸಂಗ್ರಹ ಚಿತ್ರ)
ನಟ ದರ್ಶನ್ ನಿವಾಸ (ಸಂಗ್ರಹ ಚಿತ್ರ)

ಬೆಂಗಳೂರು: ತೀವ್ರ ವಿವಾದ ಸೃಷ್ಟಿಸಿದ್ದ ನಟ ದರ್ಶನ್ ಮನೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಜಿಲ್ಲಾಡಳಿತ ದಿಟ್ಟ ನಿರ್ಧಾರ ಕೈಗೊಂಡಿದ್ದು, ಅಕ್ರಮ ಜಾಗದಲ್ಲಿರುವ ದರ್ಶನ್  ನಿವಾಸ, ಎಸ್ ಎಸ್ ಆಸ್ಪತ್ರೆ ಸೇರಿದಂತೆ ಒಟ್ಟು 69 ನಿವೇಶನಗಳನ್ನು ತೆರವುಗೊಳಿಸುವುದಾಗಿ ತಿಳಿಸಿದೆ.

ಬುಧವಾರ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರು ಜಿಲ್ಲಾಧಿಕಾರಿ ವಿ ಶಂಕರ್ ಅವರು, ಇದೇ ಅಕ್ಟೋಬರ್ 22ರಂದು ಅಂದರೆ ಶನಿವಾರ ತೆರವು ಕಾರ್ಯಾಚರಣೆ  ಕೈಗೊಳ್ಳುವುದಾಗಿ ತಿಳಿಸಿದ್ದಾರೆ. " ಇದೇ ಅಕ್ಟೋಬರ್ 22ರಂದು ವಿವಾದಿತ ಪ್ರದೇಶದಲ್ಲಿರುವ ನಟ ದರ್ಶನ್​ ನಿವಾಸ ಮತ್ತು ಎಸ್ ಎಸ್ ಆಸ್ಪತ್ರೆ ಒತ್ತುವರಿ ತೆರವು ಕಾರ್ಯಾಚರಣೆ  ನಡೆಸುತ್ತೇವೆ. ಒತ್ತುವರಿ ಜಾಗದಲ್ಲಿ ನಿರ್ಮಿಸಿರುವ ದರ್ಶನ್​ ಮನೆ ಹಾಗೂ ಆಸ್ಪತ್ರೆಯನ್ನು ನಾವು ಧ್ವಂಸಗೊಳಿಸುವುದಿಲ್ಲ. ಆದರೆ ಈ ಒತ್ತುವರಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ.  ವಿವಾದಿತ ಜಾಗದಲ್ಲಿ ಇದು ಸರ್ಕಾರದ ಆಸ್ತಿ ಎಂದು ಬೋರ್ಡ್ ಹಾಕುತ್ತೇವೆ ಎಂದು ಹೇಳಿದ್ದಾರೆ.

ನಗರದ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ ಒತ್ತುವರಿ ತೆರವು ಹಿನ್ನೆಲೆಯಲ್ಲಿ, ಇಲ್ಲಿನ 7 ಎಕರೆ 31 ಗುಂಟೆಯನ್ನು ಸರ್ಕಾರದ ಜಾಗ ಎಂದು ನಾಮಫಲಕ ಹಾಕಿ ಒತ್ತುವರಿ ವಶಕ್ಕೆ  ಪಡೆಯಲಾಗುವುದು. ಇನ್ನು ಒತ್ತುವರಿದಾರರಿಗೆ ಚರಾಸ್ತಿ ಖಾಲಿ ಮಾಡಲು 2 ದಿನ ಅವಕಾಶ ನೀಡಲಾಗುವುದು ಎಂದು ಶಂಕರ್ ತಿಳಿಸಿದ್ದಾರೆ.

ಕಟ್ಟಡವನ್ನು ಕೆಡವದೇ ಸರ್ಕಾರದ ವಶಕ್ಕೆ ಪಡೆಯುತ್ತೇವೆ
ಇದೇ ವೇಳೆ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಶಂಕರ್ ಅವರು, ನಟ ದರ್ಶನ್ ಮನೆ ಹಾಗೂ ಎಸ್. ಎಸ್ ಆಸ್ಪತ್ರೆ ಬಿ ಖರಾಬು ಭೂಮಿಯಲ್ಲಿ ಬರುತ್ತದೆ. ಹೀಗಾಗಿ  ಒತ್ತುವರಿ ತೆರವು ಖರ್ಚು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ದರ್ಶನ್ ಮನೆ ಹಾಗೂ ಎಸ್.ಎಸ್ ಆಸ್ಪತ್ರೆಯನ್ನು ಸರ್ಕಾರಿ ಭೂಮಿ ಎಂದು ಘೋಷಿಸಲಾಗುತ್ತದೆ. ಮತ್ತು ಮುಂದೆ ಈ  ಕಟ್ಟಡಗಳನ್ನು ಸರ್ಕಾರಿ ಕಚೇರಿಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಅಕ್ರಮ ನಿವಾಸಗಳನ್ನು ತೆರವುಗೊಳಿಸಿದ್ದ ಬಿಬಿಎಂಪಿ-ಬಿಡಿಎ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸ್ಥಳೀಯರು ಪ್ರಭಾವಿಗಳ ಮನೆಗಳನ್ನು ಕೂಡ ತೆರವು ಗೊಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com