
ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ಗೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೃಷ್ಣ ರಾಜೇಂದ್ರ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದೆ. ಸರ್ಕಾರಿ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆಯಾದರೂ, ಇದನ್ನು ಹೊರತು ಪಡಿಸಿದರೆ ಮಾರುಕಟ್ಟೆಯ ವಹಿವಾಟಿನ ಮೇಲೆ ಬಂದ್ ಅಷ್ಟೇನೂ ಪರಿಣಾಮ ಬೀರಿಲ್ಲ.
ನಗರದ ಗಾಂಧಿ ಬಜಾರ್, ಯಶವಂತಪುರ, ಕೆಆರ್ ಪುರಂ ಮಾರುಕಟ್ಟೆಗಳಲ್ಲಿಯೂ ಗ್ರಾಹಕರ ಸಂಖ್ಯೆಯಲ್ಲಿ ಅಷ್ಟೇನೂ ಇಳಿಮುಖ ಕಂಡುಬಂದಿಲ್ಲ. ಆದರೆ ಸರ್ಕಾರಿ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳು ಪ್ರಯಾಣಿಕರು ಪರದಾಡುತ್ತಿದ್ದಾರೆ. ನಗರ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಎಲ್ಲ ರೀತಿಯ ಸರ್ಕಾರಿ ಬಸ್ ಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿದೆ. ಇನ್ನು ನಿಲ್ದಾಣದಲ್ಲಿ ಉಳಿದಿರುವ ಪ್ರಯಾಣಿಕರು ಬಸ್ ಇಲ್ಲದೇ ಖಾಸಗಿ ವಾಹನಗಳತ್ತ ಮುಖ ಮಾಡಿದ್ದಾರೆ. ಇನ್ನು ಈ ಪರಿಸ್ಥಿತಿಯನ್ನು ಆಟೋ ಚಾಲಕರು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಅವಕಾಶವಿರುವುದರಿಂದ ಸಾರಿಗೆ ಅಧಿಕಾರಿಗಳು ಮಫ್ತಿಯಲ್ಲಿ ತಿರುಗುತ್ತಾ ಆಟೋ ಚಾಲಕರ ಮೇಲೆ ನಿಗಾ ಇರಿಸಿದ್ದಾರೆ.
ನಗರದ ರೈಲ್ವೇ ನಿಲ್ದಾಣದಲ್ಲಿ ಆಟೋ ಸಂಚಾರ ಬಹುತೇಕ ಸ್ಥಗಿತವಾಗಿದ್ದು, ಟ್ಯಾಕ್ಸಿ ಸೇವೆ ಅಬಾಧಿತವಾಗಿದೆ. ಹೀಗಾಗಿ ರೈಲು ಮೂಲಕ ನಗರಕ್ಕೆ ಆಗಮಿಸುವ ಪ್ರಯಾಣಿಕರು ಟ್ಯಾಕ್ಸಿ ಮೂಲಕ ತಮ್ಮ ತಮ್ಮ ಪ್ರದೇಶಗಳಿಗೆ ಸೇರಿಕೊಳ್ಳಬಹುದಾಗಿದೆ. ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ್ ಬಿಸಿ ಕೊಂಚ ತಟ್ಟಿದ್ದು, ಏರ್ ಪೋರ್ಟ್ ಗೆ ಸಂಚರಿಸುವ ಏರ್ ಪೋರ್ಟ್ ಟ್ಯಾಕ್ಸಿಗಳ ಸಂಖ್ಯೆ ವಿರಳವಾಗಿದೆ. ಏರ್ ಪೋರ್ಟ್ ಗೆ ಪ್ರಯಾಣಿಕರನ್ನು ಒಯ್ಯುತ್ತಿದ್ದ ವಾಯುವಜ್ರ ಬಸ್ ಸೇವೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಪ್ರಯಾಣಿಕರು ಟ್ಯಾಕ್ಸಿಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.
ಇದರ ಹೊರತಾಗಿಯೂ ಖಾಸಗಿ ಬಸ್ ಗಳು ಹಾಗೂ ಕೆಲ ಆಟೋ ಚಾಲಕರು ಪ್ರಯಾಣಿಕರಿಂದ ಸುಲಿಗೆಗೆ ಇಳಿದಿದ್ದು, ಪ್ರಯಾಣಿಕರಿಂದ ದುಬಾರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ.
Advertisement