ದರ್ಶನ್ ಮನೆ ಹಾಗೂ ಶಾಮನೂರು ಆಸ್ಪತ್ರೆಯಿಂದ ಅಕ್ರಮ ಒತ್ತುವರಿ!

ರಾಜರಾಜೇಶ್ವರಿ ನಗರದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಅಕ್ರಮ ಭೂ ಒತ್ತುವರಿ ತೆರವು ಕಾರ್ಯ ನಿರ್ಣಾಯಕ ಘಟ್ಟ ತಲುಪಿದ್ದು, ಪ್ರತಿಷ್ಥಿತರ ಪ್ರದೇಶಗಳ ಮರು ಸರ್ವೇ ಕಾರ್ಯ ಪೂರ್ಣಗೊಂಡಿದೆ.
ನಟ ದರ್ಶನ್ ಮನೆ ಹಾಗೂ ಎಸ್ ಎಸ್ ಆಸ್ಪತ್ರೆ (ಸಂಗ್ರಹ ಚಿತ್ರ)
ನಟ ದರ್ಶನ್ ಮನೆ ಹಾಗೂ ಎಸ್ ಎಸ್ ಆಸ್ಪತ್ರೆ (ಸಂಗ್ರಹ ಚಿತ್ರ)

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಅಕ್ರಮ ಭೂ ಒತ್ತುವರಿ ತೆರವು ಕಾರ್ಯ ನಿರ್ಣಾಯಕ ಘಟ್ಟ ತಲುಪಿದ್ದು, ಪ್ರತಿಷ್ಥಿತರ ಪ್ರದೇಶಗಳ ಮರು  ಸರ್ವೇ ಕಾರ್ಯ ಪೂರ್ಣಗೊಂಡಿದೆ.

ಈ ಪೈಕಿ ವಿವಾದಿತ ಪ್ರದೇಶದಲ್ಲಿರುವ ಚಿತ್ರನಟ ದರ್ಶನ್ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್ ಎಸ್ ಆಸ್ಪತ್ರೆಯಿಂದ ಅಕ್ರಮ ಭೂ ಒತ್ತುವರಿಯಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂ ದಾಖಲೆಗಳ ಜಂಟಿ ನಿರ್ದೇಶಕರು ಸೆಪ್ಟೆಂಬರ್ 8 ರಂದು ಆಯುಕ್ತರಿಗೆ ಸಲ್ಲಿಸಿರುವ ವರದಿಯಂತೆ, ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ  ಹಲಗೇವಡೇರಹಳ್ಳಿ ಗ್ರಾಮದ ಸರ್ವೇ ನಂ.3೮ರಿಂದ 41, 43ರಿಂದ 47 ಹಾಗೂ 51ರಿಂದ 56ರವರೆಗಿನ ಆಸ್ತಿಗಳ ಸರ್ವೇ ನಡೆಸಲಾಗಿದೆ. ಅದರಲ್ಲಿ ಕಂದಾಯ ಇಲಾಖೆ ದಾಖಲೆಗಳಲ್ಲಿರುವಂತೆ  ಹದ್ದಿಗಿಡಿದ ಹಳ್ಳ ಸೇರಿ ಒಟ್ಟು 15 ಸರ್ವೇ ಸಂಖ್ಯೆಯಲ್ಲಿರುವ ಆಸ್ತಿಗಳಿಂದ 7.31 ಎಕರೆ ವಿಸ್ತೀರ್ಣದ ರಾಜಕಾಲುವೆ ಜಾಗ ಒತ್ತುವರಿಯಾಗಿದೆ ಎಂದು ತಿಳಿದುಬಂದಿದೆ.

ಈ ಪೈಕಿ ಚಿತ್ರನಟ ದರ್ಶನ್‌ ಅವರ ‘ತೂಗುದೀಪ ನಿಲಯ’ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ‘ಎಸ್‌ಎಸ್ ಆಸ್ಪತ್ರೆ’ಯಿಂದ ಭೂಮಿ ಅಕ್ರಮವಾಗಿ  ಒತ್ತುವರಿಯಾಗಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಅದಕ್ಕೆ ವರದಿಯಲ್ಲಿ ಸ್ಪಷ್ಟನೆ ನೀಡಿರುವ ಭೂದಾಖಲೆಗಳ ಜಂಟಿ ನಿರ್ದೇಶಕರು, ದರ್ಶನ್ ಮನೆಯಿಂದ 2 ಗುಂಟೆ ಭೂಮಿ ಹಾಗೂ  ಎಸ್‌ಎಸ್ ಆಸ್ಪತ್ರೆಯಿಂದ 22 ಗುಂಟೆ ರಾಜಕಾಲುವೆ ಜಾಗ ಒತ್ತುವರಿ ಯಾಗಿದೆ ಎಂದು ತಿಳಿಸಿದ್ದಾರೆ.

ಪಾಲಿಕೆಯಿಂದಲೂ ಭೂ ಒತ್ತವರಿ!
ಕೇವಲ ಪ್ರತಿಷ್ಠರು ಮಾತ್ರವಲ್ಲ ಸ್ವತಃ ನಗರ ಪಾಲಿಕೆಯಿಂದಲೂ ಭೂ ಒತ್ತುವರಿಯಾಗಿದೆ ಎಂಬ ಅಂಶವನ್ನು ಸರ್ವೇ ಅಧಿಕಾರಿಗಳು ಹೊರ ಹಾಕಿದ್ದಾರೆ. ರಾಜಕಾಲುವೆ ಹಾದುಹೋಗಿರುವ  ಸುಮಾರು 7 ಗುಂಟೆ ಪ್ರದೇಶದಲ್ಲಿ ಪಾಲಿಕೆಯಿಂದ ಉದ್ಯಾನ ಹಾಗೂ ನೀರಿನ ಘಟಕ ನಿರ್ಮಿಸಲಾಗಿದೆ. ಇದಲ್ಲದೆ 3.20 ಎಕರೆ ಪ್ರದೇಶದಲ್ಲಿ ಐಡಿಯಲ್ ಹೋಮ್ ಗೃಹ ನಿರ್ಮಾಣ ಸಂಘ ಮತ್ತು  ಖಾಸಗಿಯವರ ನಿವೇಶನ, 1.24 ಎಕರೆಯಲ್ಲಿ ಐಡಿಯಲ್ ಹೋಮ್ ಬಡಾವಣೆ, 1.96ಎಕರೆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com