ದರ್ಶನ್ ಮನೆ ತೆರವು ಜಿಲ್ಲಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರ: ಬಿಬಿಎಂಪಿ

ರಾಜರಾಜೇಶ್ವರಿ ನಗರದ ವಿವಾದಿತ ಪ್ರದೇಶದಲ್ಲಿ ಇದೆ ಎಂದು ಹೇಳಲಾಗುತ್ತಿರುವ ನಟ ದರ್ಶನ್ ಅವರ ನಿವಾಸವನ್ನು ತಾನು ತೆರವುಗೊಳಿಸುವುದಿಲ್ಲ. ಅಕ್ರಮ ತೆರವು ಕಾರ್ಯವನ್ನು ಜಿಲ್ಲಾಧಿಕಾರಿಗಳ ವಿವೇಚನೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ಬಿಬಿಎಂಪಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ.
ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ನಿವಾಸ (ಸಂಗ್ರಹ ಚಿತ್ರ)
ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ನಿವಾಸ (ಸಂಗ್ರಹ ಚಿತ್ರ)

ಬೆಂಗಳೂರು: ರಾಜರಾಜೇಶ್ವರಿ ನಗರದ ವಿವಾದಿತ ಪ್ರದೇಶದಲ್ಲಿ ಇದೆ ಎಂದು ಹೇಳಲಾಗುತ್ತಿರುವ ನಟ ದರ್ಶನ್ ಅವರ ನಿವಾಸವನ್ನು ತಾನು ತೆರವುಗೊಳಿಸುವುದಿಲ್ಲ. ಅಕ್ರಮ ತೆರವು  ಕಾರ್ಯವನ್ನು ಜಿಲ್ಲಾಧಿಕಾರಿಗಳ ವಿವೇಚನೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ಬಿಬಿಎಂಪಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ.

ರಾಜರಾಜೇಶ್ವರಿನಗರದ ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿರುವ ನಟ ದರ್ಶನ್‌ ಮನೆ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಸೇರಿದಂತೆ ಒತ್ತುವರಿ ಪ್ರದೇಶದಲ್ಲಿರುವ  ಪ್ರಭಾವಿಗಳ ಕಟ್ಟಡಗಳನ್ನು ತೆರವುಗೊಳಿಸದಿರಲು ಬಿಬಿಎಂಪಿ ನಿರ್ಧರಿಸಿದೆ. ಈ ಕಟ್ಟಡಗಳಿಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲು ಎಲ್ಲ ದಾಖಲೆಗಳನ್ನು ನಗರ ಜಿಲ್ಲಾಧಿಕಾರಿಗಳಿಗೆ  ಕಳುಹಿಸಿಕೊಡಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜರಾಜೇಶ್ವರಿ ನಗರದ ಅಕ್ರಮ ಭೂ ಒತ್ತುವರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಮರು ಸರ್ವೇ ಕಾರ್ಯ ಪೂರ್ಣಗೊಂಡು, ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ  ಕೆ.ಜಯಪ್ರಕಾಶ್‌ ಅವರು ಇತ್ತೀಚೆಗೆ ಸರ್ವೇ ವರದಿಯನ್ನು ಬಿಬಿಎಂಪಿ ಆಯುಕ್ತರಿಗೆ ಸಲ್ಲಿಸಿದ್ದರು. ವರದಿಯಲ್ಲಿ ದರ್ಶನ್‌ ಅವರ ಮನೆ, ಎಸ್‌.ಎಸ್‌. ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳು  ಸುಮಾರು 7 ಎಕರೆ 31 ಗುಂಟೆಗಳಷ್ಟು ವಿಸ್ತೀರ್ಣದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಆದರೆ ಇದೀಗ ಬಿಬಿಎಂಪಿ ಒತ್ತುವರಿ ತೆರವು ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಡುತ್ತೇವೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅವರು, "ಐಡಿಯಲ್‌ ಹೋಮ್ಸ್‌ ಬಡಾವಣೆಗೆ 1969ರಲ್ಲಿ ಬೆಂಗಳೂರು ನಗರ ಸುಧಾರಣಾ ಟ್ರಸ್ಟ್‌ ಮಂಡಳಿಯಿಂದ  (ಸಿಐಟಿಬಿ) ಅನುಮೋದನೆ ಸಿಕ್ಕಿತ್ತು. 1989ರಲ್ಲಿ ಬಡಾವಣೆಯ ಪರಿಷ್ಕೃತ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೂ (ಬಿಡಿಎ) ಅನುಮತಿ ದೊರೆತಿತ್ತು. ಬಡಾವಣೆ ನಿರ್ಮಾಣಕ್ಕೆ  ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ರಾಜರಾಜೇಶ್ವರಿ ಪ್ರತಿಷ್ಠಾಪನಾ ಸಮಿತಿ 2003ರಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬಿಡಿಎ  ಹಾಗೂ ನಗರ ಜಿಲ್ಲಾಡಳಿತಕ್ಕೆ ಕೋರ್ಟ್‌ ಸೂಚನೆ ನೀಡಿತ್ತು. ಈ ಸಂಬಂಧ ನಡೆದ ತನಿಖೆಯಲ್ಲಿ 7 ಎಕರೆ, 6 ಗುಂಟೆ ಸರ್ಕಾರಿ ಪ್ರದೇಶ ಒತ್ತುವರಿಯಾಗಿದೆ ಎಂಬುದು ದೃಢಪಟ್ಟಿತ್ತು. ಈ ಸಂಬಂಧ  ಹೈಕೋರ್ಟ್‌ಗೆ ಬಿಡಿಎ ವರದಿಯನ್ನೂ ಸಲ್ಲಿಸಿತ್ತು. ಐಡಿಯಲ್‌ ಹೋಮ್ಸ್‌ನ ಡೆವಲೆಪರ್‌ಗಳು ಸಹ 2007ರಲ್ಲಿ ಕೋರ್ಟ್‌ ಮೆಟ್ಟಿಲೇರಿದರು. ಆದರೆ ಇದಾದ ಬಳಿಕ ಮುಂದೇನಾಯಿತು ಎಂಬುದರ  ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಎಲ್ಲ ದಾಖಲೆ ನೀಡಿ, ಮುಂದಿನ ಕ್ರಮವನ್ನು ಅವರ ವಿವೇಚನೆಗೆ ಬಿಡಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com