ಚಲಿಸುತ್ತಿದ್ದ ಕಾರಿನಲ್ಲೇ ಯುವತಿಯರ ಚುಂಬನ; ಆರ್ ಟಿ ನಗರದಲ್ಲಿ ಸರಣಿ ಅಪಘಾತ!

ಬೆಂಗಳೂರಿನ ಆರ್ ಟಿ ನಗರದಲ್ಲಿ ಕಳೆದ ರಾತ್ರಿ ಸರಣಿ ಅಪಘಾತವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಯುವತಿಯರು ಅಪಘಾತ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಆರ್ ಟಿ ನಗರದಲ್ಲಿ ಕಳೆದ ರಾತ್ರಿ ಸರಣಿ ಅಪಘಾತವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಯುವತಿಯರು ಅಪಘಾತ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ.

ಆರ್ ಟಿ ನಗರ ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಅಪಘಾತ ಮಾಡಿದ ಕಾರು ಚಾಲಕಿಯನ್ನು ಶಾಲಿನಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಹೊಂಡಾ ಸಿಟಿ ಕಾರಿನಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಶಾಲಿನಿ, ಆರ್ ಟಿ ನಗರದ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಬೈಕ್ ಹಾಗೂ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ.  ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಅದೇ ಕಾರಿನ ಹಿಂಬದಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ಫರ್ಹಾನ್ ಎಂಬಾತ ಯುವತಿಯರ ಕಾರನ್ನು ಸುಮಾರು ಅರ್ಧ ಕಿ.ಮೀ ದೂರ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಪೊಲೀಸರಿಗೆ ಅಪಘಾತದ ಕುರಿತು ಮಾಹಿತಿ ನೀಡಿದ ಫರ್ಹಾನ್, ಕಾರು ಚಲಾವಣೆ ವೇಳೆ ಯುವತಿಯರು ಕಂಠಪೂರ್ತಿ ಕುಡಿದಿದ್ದರು. ಅಪಘಾತವಾಗುವ ವೇಳೆ ಯುವತಿಯರು ಚಲಿಸುತ್ತಿದ್ದ ಕಾರಿನಲ್ಲೇ ಪರಸ್ಪರ ಚುಂಬಿಸಿಕೊಂಡಿದ್ದರಿಂದ ರಸ್ತೆ ಕಾಣದೆ ಕಾರು ಹಾಗೂ ಬೈಕ್ ಗೆ ಢಿಕ್ಕಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಆರ್ ಟಿ ನಗರ ಸಂಚಾರಿ ಠಾಣಾ ಪೊಲೀಸರು ಯುವತಿಯರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಮೂವರ ಪೈಕಿ ಕಾರು ಚಲಾಯಿಸುತ್ತಿದ್ದ ಶಾಲಿನಿ ಮದ್ಯ ಸೇವಿಸಿರಲಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈ ಬಗ್ಗೆ ಆಕ್ಷೇಪವೆತ್ತಿರುವ ಫರ್ಹಾನ್, ತಾವು ಬೆನ್ನಟ್ಟಿದ ವೇಳೆ ಕಾರು ಚಾಲಾಯಿಸುತ್ತಿದ್ದ ಶಾಲಿನಿ ಕೂಡ ಮದ್ಯ ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ. ವೈದ್ಯರಿಗೆ ಹಣ ನೀಡಿ ವರದಿ ಮಾರ್ಪಡಿಸಲಾಗಿದೆ ಎಂದು ಫರ್ಹಾನ್ ಆರೋಪಿಸಿದ್ದಾರೆ.

ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯರನ್ನು ವಶಕ್ಕೆ ತೆಗೆದುಕೊಂಡಿದ್ದು, ಅವರ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com