ಕಾವೇರಿ ವಿವಾದ: ಭದ್ರತೆ ಕುರಿತು ಡಿಜಿ, ಐಜಿಪಿಗೆ ಮಾಹಿತಿ ನೀಡಿದ ಪೊಲೀಸರು

ಕಾವೇರಿ ಕಿಚ್ಚು ಹೊತ್ತಿ ಉರಿದ ಹಿನ್ನೆಲೆಯಲ್ಲಿ, ನಗರದಲ್ಲಿ ಒದಗಿಸಲಾಗಿರುವ ಭದ್ರತೆ ಕುರಿತಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಅವರಿಗೆ ಪೊಲೀಸರು ಗುರುವಾರ...
ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌
ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌

ಬೆಂಗಳೂರು: ಕಾವೇರಿ ಕಿಚ್ಚು ಹೊತ್ತಿ ಉರಿದ ಹಿನ್ನೆಲೆಯಲ್ಲಿ, ನಗರದಲ್ಲಿ ಒದಗಿಸಲಾಗಿರುವ ಭದ್ರತೆ ಕುರಿತಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಅವರಿಗೆ ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.

ಕಾವೇರಿ ವಿವಾದ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ಕೆಲ ದಿನಗಳ ಹಿಂದೆ ರಾಜ್ಯ ಹೊತ್ತಿ ಉರಿಯುವಂತೆ ಮಾಡಿತ್ತು. ಪ್ರಮುಖವಾಗಿ ಬೆಂಗಳೂರಂತೂ ಅಕ್ಷರಶಃ ಬೆಂಕಿಯ ಕೆನ್ನಾಲಿಗೆಗೆ ನಲುಗಿತ್ತು.

ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯನ್ನು ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ಕಾವೇರಿ ಕುರಿತಂತೆ ಯಾವುದೇ ರೀತಿಯ ಬೆಳವಣಿಗೆಗಳು ಕಂಡುಬಂದರೂ ಈ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ.

ರಾಜ್ಯದಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿ ಕುರಿತಂತೆ ನಿನ್ನೆಯಷ್ಟೇ ಓಂ ಪ್ರಕಾಶ್ ಅವರಿಗೆ ನಗರ ಪೊಲೀಸರು ವರದಿ ಸಲ್ಲಿಸಿದ್ದು, ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ರಾಜಾಜಿನಗರ, ಪೀಣ್ಯ ಸೇರಿದಂತೆ 16 ಸೂಕ್ಷ್ಮ ಪ್ರದೇಶಗಳಿಗೆ ಒದಗಿಸಲಾಗಿರುವ ಭದ್ರತೆ ಬಗ್ಗೆ ವಿವರ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಘಟನೆ ಕುರಿತಂತೆ ಹಿಂಸಾಚಾರ ಸೃಷ್ಟಿಸಿದ್ದ 850 ಮಂದಿಯನ್ನು ಬಂಧಿಸಲಾಗಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಚರಣ್ ರೆಡ್ಡಿಯವರು ಹೇಳಿದ್ದಾರೆ.

ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಶೇ.60 ರಷ್ಟು ಮಂದಿಯನ್ನು ಬಂಧಿಸಲಾಗಿದೆ. ಇನ್ನು ಕೆಲವರು ಎಲ್ಲಿ ಬಂಧನಕ್ಕೊಳಗಾಗುತ್ತೀವೋ ಎಂಬ ಭಯದಲ್ಲಿ ನಗರ ಬಿಟ್ಟು ಹೋಗಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com