ರೂ.9 ಕೋಟಿ ನಿಷೇಧಿತ ನೋಟು ವಶ: ಕಾಂಗ್ರೆಸ್ ಮುಖಂಡನ ಅಳಿಯ ಸೇರಿ 14 ಜನರ ಬಂಧನ

ನಿಷೇಧಗೊಂಡಿರುವ ರೂ.500 ಹಾಗೂ 1,000 ನೋಟುಗಳ ಬದಲಾವಣೆ ದಂಧೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ತಿನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಸೇರಿದಂತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಿಷೇಧಗೊಂಡಿರುವ ರೂ.500 ಹಾಗೂ 1,000 ನೋಟುಗಳ ಬದಲಾವಣೆ ದಂಧೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ತಿನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಸೇರಿದಂತೆ 14 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದು, ರೂ.9 ಕೋಟಿ ಮೊತ್ತದ ಹಳೆಯ ನೋಟುಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ. 
ಬಂಧಿತರನ್ನು ವೀರಣ್ಣ ಮತ್ತಿಕಟ್ಟಿ ಅಳಿಯ ಧಾರವಾಡದ ಸದಾಶಿವ ನಗರದ ಪ್ರವೀಣ್ ಕುಮಾರ್ (43), ಎಡ್ವಿನ್ ರೊಜಾರಿಯೋ (38), ಎನ್. ಉಮೇಶ್ (45), ಪ್ರಭು ಮಹಾಂತೇಶ್ (34), ಭೂಪಸಂದ್ರ ಆನ್ ಬಳಗನ್ ರಾಜು (47), ಮನ್ ಮೋಹನ (51), ನಾರಾಯಣ ಭಟ್ (56), ಪಿ.ಚಂದ್ರಶೇಖರ್ (50), ಎಸ್. ಶ್ರೀನಿವಾಸ್ (39), ಅರುಣ್ (42), ಮೊಹಮದ್ ಇಮ್ರಾನ್ (28), ಹ್ಯಾರಿಸ್ (40), ಎಸ್. ಕಿಶೋರ್ ಕುಮಾರ್ (30), ಶೇಖರ್ (37) ಎಂದು ಗುರ್ತಿಸಲಾಗಿದೆ. 
ಬಂಧಿತ 14 ಮಂದಿ ಆರೋಪಗಳಲ್ಲಿ ಒಬ್ಬರಾಗಿರುವ ಮತ್ತಿಕಟ್ಟಿ ಅಳಿಯ (ಮಗಳ ಗಂಡ) ಪ್ರವೀಣ್ ಕುಮಾರ್ ಈ ದಂಧೆಯ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ. ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಆರೋಪಿಗಳಿಂದ ರೂ.500 ಹಾಗೂ 1,000 ಮುಖಬೆಲೆಯ ರೂ.9 ಕೋಟಿ ನಗದು, 2 ಐಷಾರಾಮಿ ಕಾರು ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 
ಮಾರ್ಚ್.8 ರಂದು ರೂ.4.9 ಕೋಟಿ ಮೊತ್ತದ ಹಳೇ ನೋಟು ಬದಲಿಸಲು ಬೆಂಗಳೂರುನಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಂಜುಂಡ, ಇನ್ನಿತರರನ್ನು ವಿಚಾರಣೆಗೊಳಪಡಿಸಿದಾಗ ಪ್ರವೀಣ್ ಬಗ್ಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  
ಆರೋಪಿಗಳ ಬಂಧನ ಕುರಿತಂತೆ ಸಿಸಿಬಿ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿ ಮಾತನಾಡಿದ್ದು, ಖಚಿತ ಮಾಹಿತಿ ಆಧಾರದ ಮೇಲೆ ಬೆನ್ಸನ್ ಟೌನ್ ನಲ್ಲಿರುವ ಆರೋಪಿ ಎಡ್ವಿನ್ ಮನೆ ಮೇಲೆ ಶನಿವಾರ ರಾತ್ರಿ ದಾಳಿ ಮಾಡಲಾಗಿತ್ತು. ಈ ವೇಳೆ ಹಳೇನೋಟುಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಯಿತು. ಪೊಲೀಸರು 15 ಮೊಬೈಲ್ ಫೋನುಗಳು ಹಾಗೂ 2 ಕಾರುಗಳನ್ನು ವಶಕ್ಕೆ ಪಡೆದಿದ್ದರು. ಪ್ರಸ್ತುತ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com