ಜನರ ವಿಶ್ವಾಸವನ್ನು ಗೆಲ್ಲಿ: ರಾಜ್ಯ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ
ಸರ್ಕಾರದಲ್ಲಿ ಪೊಲೀಸ್ ವ್ಯವಸ್ಥೆ ಮುಖ್ಯವಾದ ಅಂಗವಾಗಿದ್ದು, ಸಮಾಜ ನೆಮ್ಮದಿಯಿಂದ ಇರಬೇಕಾದರೆ, ಪೊಲೀಸರು ಪ್ರಮಾಣಿಕ, ದಕ್ಷತೆಯಿಂದ ಕೆಲಸ ಮಾಡಬೇಕು. ಜನರ ವಿಶ್ವಾಸವನ್ನು ಗೆಲ್ಲಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಬೆಂಗಳೂರು: ಸರ್ಕಾರದಲ್ಲಿ ಪೊಲೀಸ್ ವ್ಯವಸ್ಥೆ ಮುಖ್ಯವಾದ ಅಂಗವಾಗಿದ್ದು, ಸಮಾಜ ನೆಮ್ಮದಿಯಿಂದ ಇರಬೇಕಾದರೆ, ಪೊಲೀಸರು ಪ್ರಮಾಣಿಕ, ದಕ್ಷತೆಯಿಂದ ಕೆಲಸ ಮಾಡಬೇಕು. ಜನರ ವಿಶ್ವಾಸವನ್ನು ಗೆಲ್ಲಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ಕೋರಮಂಗಲದಲ್ಲಿ ಕೆಎಸ್ಆರ್ ಪಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಮಾತನಾಡಿರುವ ಅವರು, ಪೊಲೀಸರು ಪ್ರಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬ ಪೊಲೀಸರಿಗೂ ಜಾಣ್ಮೆ ಮತ್ತು ತಾಳ್ಮೆ ಅಗತ್ಯವಾಗಿದೆ.
ತಾಳ್ಮೆ ಹಾಗೂ ಜಾಣ್ಮೆ ಇದ್ದರೆ ಮಾತ್ರ ಅತ್ಯುತ್ತಮ ಪೊಲೀಸ್ ಆಗಲು ಸಾಧ್ಯ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಪದೇ ಪದೇ ಆಪರಾಧ ಕೃತ್ಯಗಳನ್ನು ಮಾಡುವ ವ್ಯಕ್ತಿಗಳ ಮೇಲೆ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ನಿರಂತರವಾಗಿ ನಿಗಾ ಇಟ್ಟು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಮಾತ್ರವಲ್ಲ, ಕಾಲ ಕಾಲಕ್ಕೆ ಜನ ಸಂಪರ್ಕ ಸಭೆಗಳನ್ನು ನಡೆಸಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ರೂ.20 ಕೋಟಿ ನೀಡುವಂತೆ ಈ ಹಿಂದೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ರೂ.10 ಕೋಟಿಯನ್ನು ನೀಡಿದೆ. ಇನ್ನೂ ರೂ.10 ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗುವುದು ಎಂದು ತಿಳಿಸಿದರು.