ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ: ಕಲುಷಿತ ನೀರು ತಡೆಯದಿದ್ದರೆ ಕಠಿಣ ಆದೇಶ: ಎನ್ ಜಿಟಿ

ಬೆಳ್ಳಂದೂರು ಕೆರೆಗೆ ಹರಿಯುತ್ತಿರುವ ಕಲುಷಿತ ನೀರನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕರ್ನಾಟಕ ಸರ್ಕಾರಕ್ಕೆ ಬುಧವಾರ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಳ್ಳಂದೂರು ಕೆರೆಗೆ ಹರಿಯುತ್ತಿರುವ ಕಲುಷಿತ ನೀರನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕರ್ನಾಟಕ ಸರ್ಕಾರಕ್ಕೆ ಬುಧವಾರ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿನ ಕಲುಷಿತ ನೀರಿನಿಂದ ಉಂಟಾಗುತ್ತಿದ್ದ ನೊರೆ ಹಾಗೂ ಬೆಂಕಿ ಪ್ರಕರಣ ಸಂಬಂಧ ಸ್ವಯಪ್ರೇರಿತ ದೂರು ದಾಖಲಿಸಿಕೊಂಡಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಇಂದು ಆದೇಶ ನೀಡಿದ್ದು,  ಬೆಳ್ಳಂದೂರು ಕೆರೆಗೆ ಹರಿಯುತ್ತಿರುವ ಕಲುಷಿತ ನೀರನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಕೆರೆ ಸಂರಕ್ಷಣೆಗಾಗಿ ನಿರ್ಬಂಧಿತ ದಿಕ್ಕಿನಲ್ಲಿ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.  ಅಂತೆಯೇ ಕೆರೆಗೆ ಹರಿಯುವ ನೀರು ಮೊದಲು ನೀರು ಸಂಸ್ಕರಣ ಘಟಕದಲ್ಲಿ ಸಂಸ್ಕರಣೆಯಾಗಿ ಬಳಿಕ ಕೆರೆಗೆ ಹರಿಸುವಂತೆ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದೂ ಹಸಿರು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಸಲಹೆ  ನೀಡಿದೆ.

ಬೆಳ್ಳಂದರೂ ಕೆರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದ್ದು, ಸ್ಥಳೀಯ ನಗರ ಪಾಲಿಕೆ ಅಧಿಕಾರಿಗಳು ಕೆರೆಯ ಸುರಕ್ಷತೆ ವಿಚಾರದಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಹೀಗಾಗಿ  ಪ್ರಕರಣ ಸಂಬಂಧ ತಾನೇ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಳ್ಳುವುದಾಗಿ ಈ ಹಿಂದೆ ಹಸಿರು ನ್ಯಾಯಾಧಿಕರಣ ಹೇಳಿತ್ತು, ಅಂತೆಯೇ ಸ್ವಯಂ ಪ್ರೇರಿತ ಅರ್ಜಿ ಕೂಡ ದಾಖಲಿಸಿಕೊಂಡಿತ್ತು. ಕೆರೆಯ ಸುತ್ತಮುತ್ತಲಿರುವ  ಕೈಗಾರಿಕೆಗಳು ಹಾಗೂ ಅಪಾರ್ಟ್ ಮೆಂಟ್ ನಿಂದ ಬರುವ ತ್ಯಾಜ್ಯ ನೀರು ಸಂಸ್ಕರಣೆಯಾಗದೇ ನೇರ ಕೆರೆಗೆ ಹರಿಯುತ್ತಿದ್ದರಿಂದ ಕೆರೆಯ ನೀರು ಕಲುಷಿತವಾಗಿ ಅಪಾರ ಪ್ರಮಾಣದ ನೊರೆ ಏಳುತ್ತಿತ್ತು. ಅಲ್ಲದೆ  ರಾಸಾಯನಿಕಗಳಿಂದಾಗಿ ಕಾಣಿಸಿಕೊಳ್ಳುತ್ತಿದ್ದ ಬೆಂಕಿ ಕೂಡ ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com