
ಬೆಂಗಳೂರು: ಪಂದ್ಯ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿದ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ ಸ್ಪರ್ಧೆ ಗೆಲ್ಲಬೇಕು ಎಂಬ ಕಾರಣಕ್ಕೆ ಕುದುರೆಗೆ ಉದ್ದೀಪನ ಔಷಧಿ ನೀಡಿರುವ ಆಘಾತಕಾರಿ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ದೇಶವ್ಯಾಪಿ ಖ್ಯಾತಿ ಗಳಿಸಿರುವ ಬೆಂಗಳೂರು ಟರ್ಫ್ ಕ್ಲಬ್ ನಲ್ಲೇ ಇಂತಹುದೊಂದು ಗಂಭೀರ ಆರೋಪ ಕೇಳಿಬಂದಿದ್ದು, ರೇಸ್ನ ಫಲಿತಾಂಶವನ್ನು ಏರುಪೇರು ಮಾಡಲು ಕುದುರೆಗಳಿಗೂ ಉದ್ದೀಪನ ಮದ್ದು ನೀಡುತ್ತಿರುವ ಆಘಾತಕಾರಿ ಪ್ರಕರಣ ಕ್ಲಬ್ ನಲ್ಲಿ ಬೆಳಕಿಗೆ ಬಂದಿದೆ. ಕುದುರೆಗಳಿಗೆ ಉದ್ಧೀಪನ ಮದ್ದು ನೀಡಿರುವ ಕುರಿತು ವೈದ್ಯಕೀಯ ಪರೀಕ್ಷೆಗಳಿಂದ ಸಾಬೀತಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಕುದುರೆ ಮಾಲೀಕರಾದ ರಾಜಾಜಿ ನಗರ ನಿವಾಸಿ ಎಚ್.ಎಸ್. ಚಂದ್ರೇಗೌಡ ಎಂಬುವರು ಟರ್ಫ್ ಕ್ಲಬ್ ಸಿಇಒ ನಿರ್ಮಲ್ ಪ್ರಸಾದ್, ಚೀಫ್ ಸ್ಟೈಪೆಂಡರಿ ಆಫೀಸರ್ ಪ್ರದ್ಯುಮ್ನ ಸಿಂಗ್, ವಿವೇಕ್ ಉಬಯ್ಕರ್, ಅರ್ಜುನ್ ಸಜ್ನಾನಿ ಮತ್ತು ನೀಲ್ ದ್ರಷ್ ಮತ್ತಿತರರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಟರ್ಫ್ ಕ್ಲಬ್ ನಲ್ಲಿ ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ ಮಿಲೇನಿಯಮ್ ಕಪ್ನ ಮೊದಲ ಹಂತದ ಇನ್ವಿಟೇಷನ್ ಕಪ್ ರೇಸ್ ನಡೆದಿತ್ತು. ಇದರಲ್ಲಿ ಮೂರು ವರ್ಷದ ಹೆಣ್ಣು ಕುದುರೆ ಕ್ವೀನ್ ಲತೀಫಾ ಮೊದಲ ಸ್ಥಾನ ಗಳಿಸಿತ್ತು. ರೇಸ್ ನ ಬಳಿಕ ಕುದುರೆಯ ಮೂತ್ರ ಮತ್ತು ರಕ್ತದ ಮಾದರಿಯನ್ನು ದೆಹಲಿಯಲ್ಲಿರುವ ನ್ಯಾಷನಲ್ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಕ್ವೀನ್ ಲತೀಫಾ ಕುದುರೆಗೆ ಉದ್ದೀಪನ ಮದ್ದು ನೀಡಿರುವುದು ಖಚಿತಪಟ್ಟಿತ್ತು. ಈ ಬಗ್ಗೆ ಟರ್ಫ್ ಕ್ಲಬ್ಗೆ ಮಾಹಿತಿ ಸಿಕ್ಕಿದರೂ, ಸಿಇಒ ನಿರ್ಮಲ್ ಪ್ರಸಾದ್ ಮಾಹಿತಿ ಮುಚ್ಚಿಟ್ಟು ಅಕ್ರಮ ಎಸಗಿದ್ದಾರೆ ಎಂದು ಚಂದ್ರೇಗೌಡ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರೇಗೌಡ ಅವರು, "ರೇಸ್ ಕುದುರೆಗಳಿಗೆ ಸಾಮಾನ್ಯವಾಗಿ ಎರಡು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. 15 ದಿನಗಳಿಗೊಮ್ಮೆ ಉದ್ದೀಪನ ಮದ್ದು ಪರೀಕ್ಷೆ ಮಾಡಲಾಗುತ್ತದೆ. ಆದರೆ ಕಳೆದ 3 ವರ್ಷಗಳಿಂದ ಟರ್ಫ್ ಕ್ಲಬ್ ನಲ್ಲಿ ಕುದುರೆಗಳಿಗೆ ಉದ್ದೀಪನ ಮದ್ದು ನೀಡಲಾಗುತ್ತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಇದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಚಂದ್ರೇಗೌಡ ಅವರ ದೂರನ್ನು ಆಧರಿಸಿ ಹೈಗ್ರೌಂಡ್ಸ್ ಪೊಲೀಸರು ಆರೋಪಿತ ಐದು ಮಂದಿ ವಿರುದ್ಧ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಟ್ಟಿರುವುದು, ತಪ್ಪು ಮಾಡಿದ ವ್ಯಕ್ತಿಯ ರಕ್ಷಣೆ, ಪ್ರಾಣಿಗಳಿಗೆ ವಿಷಾಹಾರ ಕೊಡುವುದು, ವಂಚನೆ, ಪಿತೂರಿ, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕಾಯ್ದೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
Advertisement