ಬೆಂಗಳೂರು: ಕಾವೇರಿ ನದಿಯ ನಾಲೆಗಳಿಗೆ ನೀರು ಹರಿಸುವಂತೆ ಕಳೆದ 34 ದಿನಗಳಿಂದ ರೈತರು ನಡೆಸಿದ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ, ಕೆಆರ್‌ಎಸ್, ಕಬಿನಿ, ಹಾರಂಗಿ ಹೇಮಾವತಿ ಜಲಾಶಯಗಳಿಂದ ಕೆರೆ–ಕಟ್ಟೆಗಳಿಗೆ ನಾಳೆಯಿಂದ ನೀರು ಹರಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀರು ಬಿಡಲು ತೀರ್ಮಾನಿಸಲಾಗಿದ್ದು, ಕುಡಿಯುವ ನೀರಿಗಾಗಿ, ಜಾನುವಾರುಗಳಿಗೆ ಹಾಗೂ ಅಂತರ್ಜಲದ ಮಟ್ಟ ಹೆಚ್ಚಿಸಲು ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆರೆ–ಕಟ್ಟೆಗಳಿಗೆ ಹರಿಸಿದ ನೀರನ್ನು ಭತ್ತ ಕಬ್ಬು ಬೆಳೆಯಲು ಬಳಸಬೇಡಿ, ಅದಕ್ಕೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಮಳೆಯ ಆಧಾರಿತ ಬೆಳೆಗಳನ್ನು ಮಾತ್ರ ಬೆಳೆಯುವಂತೆ ರೈತರಲ್ಲಿ ಮನವಿ ಮಾಡಿದರು.
ಕಬಿನಿ, ಕೆಆರ್‌ಎಸ್, ಹಾರಂಗಿ ಹಾಗೂ ಹೇಮಾವತಿ ನಾಲ್ಕು ಜಲಾಶಯಗಳಲ್ಲಿ 45 ಟಿಎಂಸಿ ನೀರಿದ್ದು, ಒಳ ಹರಿವು ಕಡಿಮೆಯಿದೆ. ನಾಲ್ಕೂ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಕೆರೆಗಳಿವೆ. ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕೆಂದು ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ, ಕೃಷ್ಣಬೈರೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಪ್ಪ, ಸಂಸದ ಪುಟ್ಟರಾಜು, ಶಾಸಕರಾದ ನರೇಂದ್ರಸ್ವಾಮಿ, ಪುಟ್ಟಣ್ಣಯ್ಯ, ಮರಿತಿಬ್ಬೇಗೌಡ, ಅಂಬರೀಶ್, ಶ್ರೀಕಂಠೇಗೌಡ, ಚಲುವರಾಯಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು.