ಬೆಂಗಳೂರು: ಮುಂಬೈಯ ಎಟಿಎಂ ದರೋಡೆಕೋರರನ್ನು ಬಂಧಿಸಿದ ನಗರ ಪೊಲೀಸರು

ಅದು ಎಂದಿನಂತೆ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ನಗರದ ಹೊಟೋಲ್ ನಲ್ಲಿ ನಡೆಸಿದ ಭದ್ರತಾ....
ಬಂಧಿತ ದರೋಡೆಕೋರರು
ಬಂಧಿತ ದರೋಡೆಕೋರರು
ಬೆಂಗಳೂರು: ಅದು ಎಂದಿನಂತೆ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ  ನಗರದ ಹೊಟೋಲ್ ನಲ್ಲಿ ನಡೆಸಿದ ಭದ್ರತಾ ತಪಾಸಣೆಯಾಗಿತ್ತು. ಆದರೆ ಈ ಬಾರಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ತಪಾಸಣೆ ಮಾಡಿದಾಗ ಮುಂಬೈಯ ಮೂವರು ಎಟಿಎಂ ದರೋಡೆಕೋರರು ಸಿಕ್ಕಿದರು.
ಸುಮಾರು 20 ವರ್ಷದ ಆಸುಪಾಸಿನಲ್ಲಿರುವ ದರೋಡೆಕೋರರು ಹಣ ದೋಚಿ ಭಾರತದಾದ್ಯಂತ ದುಬಾರಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದ ಅವರು ಕಳೆದೊಂದು ತಿಂಗಳಿಂದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಸದರ್ನ್ ಸ್ಟಾರ್ ಹೊಟೇಲ್ ನಲ್ಲಿ ತಂಗಿದ್ದರು.
24 ವರ್ಷದ ರಾಕೇಶ್, ನಯನ್ ವಿಜಯ್ ಭಾನುಶಾಲಿ ಮತ್ತು 22 ವರ್ಷದ ಜ್ಯೋತಿಸ್ ಚಾದಿಲಾಲ್ ಗುಪ್ತಾ ಮುಂಬೈಯವರಾಗಿದ್ದಾರೆ. ಅವರು ಕಳೆದ ಮೇ 16ರಂದು ಮುಂಬೈಯ ಎಟಿಎಂವೊಂದರಿಂದ 34 ಲಕ್ಷ ರೂಪಾಯಿ ದರೋಡೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.
ರಾಕೇಶ್ ಮುಂಬೈಯ ನಗದು ನಿರ್ವಹಣೆ ಕಂಪೆನಿಯೊಂದರಲ್ಲಿ ನಗದು ಸುಪರ್ದುದಾರನಾಗಿ ಕೆಲಸ ಮಾಡುತ್ತಿದ್ದ. ಎಟಿಎಂ ಕಿಯೊಸ್ಕ್ ನಲ್ಲಿ ಹಣವನ್ನು ಮರುತುಂಬಿಸುವ ತಂಡದ ಮುಖ್ಯಸ್ಥನಾಗಿದ್ದ. ಆತನಲ್ಲಿ ಎಟಿಎಂಸ ಕೀಗಳಿದ್ದವು. ಅದರ ಪಾಸ್ ವರ್ಡ್ ಕೂಡ ತಿಳಿದಿತ್ತು. ಬೇಗನೆ ಹಣ ಸಂಪಾದನೆ ಮಾಡುವ ದುರಾಸೆಯಲ್ಲಿ ಸ್ನೇಹಿತ ವಿಜಯ್ ಜೊತೆ ಸೇರಿಕೊಂಡು ಉಪಾಯ ರೂಪಿಸಿದ. ವಿಜಯ್ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ ಗುಪ್ತ ನಿರುದ್ಯೋಗಿಯಾಗಿದ್ದ.
ಮೇ 16ರಂದು ಮುಂಬೈಯ 3 ಕಡೆಗಳಲ್ಲಿ ಎಟಿಎಂ ಕಿಯೊಸ್ಕ್ ನಲ್ಲಿ ಹಣ ತುಂಬಿಸಲೆಂದು ರಾಕೇಶ್ ಹೋದನು. ಆದರೆ ಹಣ ತುಂಬಿಸದೆ ನಗದು ತುಂಬಿದ್ದ ವ್ಯಾನ್ ನೊಂದಿಗೆ ತನ್ನ ಇಬ್ಬರು ಸಹಚರರೊಂದಿಗೆ ಪರಾರಿಯಾದನು. ಸ್ವಲ್ಪ ದೂರದಲ್ಲಿ ವ್ಯಾನ್ ಬಿಟ್ಟು ಹಣದೊಂದಿಗೆ ಬೇರೆ ಸ್ಥಳಕ್ಕೆ ಪರಾರಿಯಾದರು.
ಮೊದಲಿಗೆ ದೆಹಲಿಗೆ ಹೋದರು. ಆದರೆ ಪೊಲೀಸರು ಹುಡುಕುತ್ತಿದ್ದಾರೆ ಎಂದು ತಿಳಿಯಿತು. ಹೀಗಾಗಿ ಅಲ್ಲಿಂದ ಹೊರಟು ಕುಲ್ಲು-ಮನಾಲಿ, ಅಮೃತ್ ಸರ್, ಜಮ್ಮು, ಗೋವಾ ಮತ್ತು ಪುಣೆಯನ್ನೆಲ್ಲಾ ಸುತ್ತಾಡಿ ಬೆಂಗಳೂರಿಗೆ ಬಂದಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ 23ರಂದು ಬಂದಿಳಿದ ಮೂವರು ಸುತ್ತಾಡಲು ಕ್ಯಾಬ್ ಬಳಸುತ್ತಿದ್ದರು. ಲ್ಯಾವೆಲ್ಲೆ ರಸ್ತೆಯ ಸದರ್ನ್ ಸ್ಟಾರ್ ಹೊಟೇಲ್ ನಲ್ಲಿ ರೂಂ ಬುಕ್ ಮಾಡಿದರು. ಕರ್ನಾಟಕದ ಕೆಲ ಪ್ರದೇಶಗಳನ್ನು ಕೂಡ ಸುತ್ತಿ ಬಂದಿದ್ದಾರೆ. ಬೆಂಗಳೂರಿನಲ್ಲಿರುವಾಗ ಹಗಲು ಹೊತ್ತು ಸಿನಿಮಾಗೆ ಥಿಯೇಟರ್ ಗೆ ಮತ್ತು ರಾತ್ರಿ ಹೊತ್ತು ಬ್ರಿಗೇಡ್ ರೋಡ್, ಎಂ.ಜಿ.ರೋಡ್ ನಲ್ಲಿ ಪಬ್ ಗಳಿಗೆ ಹೋಗಿ ಕುಡಿಯುವುದು ಅವರ ಕೆಲಸವಾಗಿತ್ತು. ಆಗಾಗ ಶಾಪಿಂಗ್ ಕೂಡ ಮಾಡುತ್ತಿದ್ದರು.
ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಭದ್ರತಾ ತಪಾಸಣೆಯಾಗಿ ನಿನ್ನೆ ಪೊಲೀಸರು ಹೊಟೇಲ್ ಗಳಲ್ಲಿ ಉಳಿದುಕೊಂಡವರ ತಪಾಸಣೆ ಮಾಡುತ್ತಿದ್ದರು. ಸದರ್ನ್ ಹೊಟೇಲ್ ಗೆ ಹೋದಾಗ ಅಲ್ಲಿನ ಸಿಬ್ಬಂದಿ ಮೂವರು ತಮ್ಮ ಹೊಟೇಲ್ ನಲ್ಲಿ ಕಳೆದೊಂದು ತಿಂಗಳಿನಿಂದ ಉಳಿದುಕೊಂಡಿದ್ದು ಅವರ ಚಲನವಲನ ಶಂಕಾಸ್ಪದವಾಗಿದೆ ಎಂದು ಹೇಳಿದ್ದಾರೆ.
ಪೊಲೀಸರು ಬಂದು ತಪಾಸಣೆ ಮಾಡಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಮುಂಬೈ ಪೊಲೀಸರಿಗೆ ಬೇಕಾದ ವ್ಯಕ್ತಿಗಳಾಗಿದ್ದಾರೆ ಎಂದು ಗೊತ್ತಾಯಿತು. ಇಂದು ನಗರಕ್ಕೆ ಆಗಮಿಸಲಿರುವ ಮುಂಬೈ ಪೊಲೀಸರಿಗೆ ಈ ಆರೋಪಿಗಳನ್ನು ನಗರ ಪೊಲೀಸರು ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com