ಬೆಂಗಳೂರು: ಚೀನಾ ಹೊಸ ವರ್ಷ ಆಚರಣೆಗೆ ಶಾಲೆ ಯೋಜನೆ; ಎಬಿವಿಪಿ ಪ್ರತಿಭಟನೆಯಿಂದ ರದ್ದು

ಸಾಂಪ್ರದಾಯಿಕ ಚಪ್ಪಲಿಗಳನ್ನು ಧರಿಸಿ ಚೀನಿ ಸಂಪ್ರದಾಯದಂತೆ ಚೀನಾ ದೇಶದ ಹೊಸ ವರ್ಷವನ್ನು ಉತ್ತರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಂಪ್ರದಾಯಿಕ ಚಪ್ಪಲಿಗಳನ್ನು ಧರಿಸಿ ಚೀನಿ ಸಂಪ್ರದಾಯದಂತೆ ಚೀನಾ ದೇಶದ ಹೊಸ ವರ್ಷವನ್ನು ಉತ್ತರ ಬೆಂಗಳೂರಿನ ಪ್ರತಿಷ್ಟಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಏರ್ಪಡಿಸಲು ವ್ಯವಸ್ಥೆ ಮಾಡಲಾಗಿತ್ತು.
ಆದರೆ ಇದೀಗ ಕೆಲವು ಬಿಜೆಪಿ ನಾಯಕರು ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯಿಂದಾಗಿ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಕಾರ್ಯಕ್ರಮ ನಡೆಸಿದರೆ ಶಾಲೆಯನ್ನೇ ಮುಚ್ಚಿಸುತ್ತೇವೆ ಎಂದು ಎಬಿವಿಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
ಬೆಂಗಳೂರು ಉತ್ತರ ಭಾಗದಲ್ಲಿರುವ ದೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಇಂದು ಪಠ್ಯೇತರ ಚಟುವಟಿಕೆಯಾಗಿ ಒಂದನೇ ತರಗತಿ ಮಕ್ಕಳಿಗೆ 6 ದೇಶಗಳ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮ ನಡೆಸುವ ಯೋಜನೆ ಮಾಡಲಾಗಿತ್ತು. 
ಕಳೆದ ಮೂರರಂದು ಒಂದನೇ ತರಗತಿಯ  ಮೂರು ವಿಭಾಗದ ಮಕ್ಕಳಿಗೆ ಸುತ್ತೋಲೆ ಹೊರಡಿಸಿ ಸ್ಟೇಷನರಿ ವಸ್ತುಗಳಾದ ಗ್ಲಿಟರ್ ಟ್ಯೂಬ್, ಅಲಂಕಾರಿಕ ಸ್ಟಿಕರ್, ರೆಡ್ ಶೀಟ್ಸ್ ಇತ್ಯಾದಿಗಳನ್ನು ತರುವಂತೆ ಹೇಳಲಾಗಿತ್ತು. ಚೀನಾ ದೇಶದ ಉಡುಪಿನಂತೆ ಮಕ್ಕಳಿಗೆ ಬಟ್ಟೆ ಧರಿಸಿ ಕಳುಹಿಸುವಂತೆ ಹಾಗೂ ಚೀನಾ ದೇಶದ ಆಹಾರಗಳಾದ ನೂಡಲ್ಸ್, ಫ್ರೈಡ್ ರೈಸ್, ಮೊಮೊಸ್, ಮಂಚೂರಿ ಇತ್ಯಾದಿಗಳನ್ನು ಊಟದ ಡಬ್ಬಿಗೆ ಹಾಕಿ ಕಳುಹಿಸುವಂತೆ ಹೇಳಲಾಗಿತ್ತು.
ವಿಷಯ ತಿಳಿದ ಎಬಿವಿಪಿ ಕಾರ್ಯಕರ್ತರು ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿದರು. ಎಬಿವಿಪಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ಶಾಲೆಯ ವ್ಯವಸ್ಥಾಪಕರು ನಮ್ಮನ್ನು ಅರ್ಥೈಸಲು ಪ್ರಯತ್ನಿಸಿದರು. ಆದರೆ ಕಾರ್ಯಕ್ರಮವನ್ನು ಹಿಂತೆಗೆದುಕೊಳ್ಳದಿದ್ದರೆ ಶಾಲೆ ನಡೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದೇವೆ. ಚೀನಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ನಡೆಸುವ ಬದಲಿಗೆ ನ್ಯಾಶನಲ್ ಫಸ್ಟ್ ಕಾರ್ಯಕ್ರಮವನ್ನು ನಡೆಸಿ ಎಂದು ಹೇಳಿದ್ದೇವೆ ಎಂದು ತಿಳಿಸಿದರು.
ಕೊನೆಗೂ ಎಬಿವಿಪಿ ವಿರೋಧ, ಪ್ರತಿಭಟನೆಗೆ ಮಣಿದ ಶಾಲೆ ಇಂದು 6 ದೇಶಗಳಿಗೆ ಸಂಬಂಧಪಟ್ಟಂತೆ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮಗಳನ್ನೆಲ್ಲಾ ರದ್ದುಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಲೆಯ ಪ್ರಾಂಶುಪಾಲ ಮಂಜು ಬಾಲಸುಬ್ರಹ್ಮಣ್ಯಂ, ಜಾಗತಿಕ ಮಟ್ಟದ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲು ಬ್ರಿಟಿಷ್ ಕೌನ್ಸಿಲ್ ಜಾರಿಗೆ ತಂದ ಕಾರ್ಯಕ್ರಮದ ಒಂದು ಭಾಗ. ಭಾರತ ಸೇರಿದಂತೆ 6 ದೇಶಗಳ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ವಿವಿಧ ತರಗತಿಗಳ ಮಕ್ಕಳಿಗೆ ವಿವಿಧ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. 
ಒಂದನೇ ತರಗತಿ ಮಕ್ಕಳಿಗೆ ಹೊಸ ವರ್ಷದ ವಿಷಯವನ್ನು ಆಯ್ಕೆ ಮಾಡಿಕೊಂಡು ಎ,ಬಿ ಮತ್ತು ಸಿ ವಿಭಾಗದ ಮಕ್ಕಳಿಗೆ ಚೀನಾ ದೇಶವನ್ನು, ಡಿ,ಇ ಮತ್ತು ಎಫ್ ವಿಭಾಗದ ಮಕ್ಕಳಿಗೆ ಡೆನ್ಮಾರ್ಕ್ ದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದೇ ರೀತಿ ಫ್ರಾನ್ಸ್, ಇಟೆಲಿ ಮತ್ತು ಭಾರತವನ್ನು ಇತರ ತರಗತಿ ಮಕ್ಕಳಿಗೆ ನೀಡಲಾಗಿತ್ತು. ಮೇಲಿನ ತರಗತಿ ಮಕ್ಕಳಿಗೆ ವಿವಿಧ ದೇಶಗಳ ಆರ್ಥಿಕತೆ ಬಗ್ಗೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಇದೀಗ ಇಡೀ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com