
ಹುಬ್ಬಳ್ಳಿ: ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ಹಣ ಸಾಲ ಪಡೆದು ತೀರಿಸಲಾಗದೇ ವಿದೇಶಕ್ಕೆ ಹಾರಿರುವ ಉದ್ಯಮಿ ವಿಜಯ ಮಲ್ಯಗೆ ಸೇರಿದ ದುಬಾರಿ ಕಾರನ್ನು ಹುಬ್ಬಳ್ಳಿಯ ಉದ್ಯಮಿಯೊಬ್ಬರು ಅಗ್ಗದ ದರಕ್ಕೆ ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಉದ್ಯಮಿ ವಿಜಯ್ ಮಲ್ಯ ಅವರ ದುರಾರಿ ಬೆಲೆಯ ಕಾರನ್ನು ಹುಬ್ಬಳ್ಳಿಯ ಉದ್ಯಮಿ ಹನುಮಂತ ರೆಡ್ಡಿ ಅವರು ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ಮಲ್ಯ ಒಡೆತನದ ಯುಬಿ ಗ್ರೂಪ್'ಗೆ ಸೇರಿರುವ ಎರಡು ಕಾರುಗಳನ್ನು ಕಳೆದ ಜನವರಿಯಲ್ಲಿ ಮುಂಬೈನಲ್ಲಿ ಆನ್ ಲೈನ್ ಮೂಲಕ ಹರಾಜು ಹಾಕಲಾಗಿತ್ತು. ಈ ಪೈಕಿ ಮಲ್ಯ ಅವರು ಬಳಸುತ್ತಿದ್ದ ದುಬಾರಿ ಬೆಲೆಯ ಎರಡು ಕಾರಗಳನ್ನು ಹನುಮಂತ ರೆಡ್ಡಿ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ರೂ.13.15ಲಕ್ಷದ ಹುಂಡೈ ಸೋನಾಟಾ ಗೋಲ್ಡ್ ಹಾಗೂ ರೂ. 21 ಲಕ್ಷಕ್ಕೂ ಅಧಿಕ ಮೌಲ್ಯದ ಹೊಂಡಾ ಎಕಾರ್ಡ್ ಕಾರನ್ನು ಹನುಮಂತ ರೆಡ್ಡಿ ಕೇವಲ ರೂ.೧.೪೦ಲಕ್ಷಕ್ಕೆ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ, ಹರಾಜಿನ ಮೂಲ ಬೆಲೆಯ ಪ್ರಕಾರ ಎರಡೂ ಕಾರುಗಳ ಅಂದಾಜು ಬೆಲೆ ರೂ.32 ಲಕ್ಷ ಗಳಾಗಿದ್ದು, ಆದರೆ, ಆನ್ ಲೈನ್ ಹರಾಜಿನಲ್ಲಿ ಹನುಮಂತ ರೆಡ್ಡಿ ಕೇವಲ ರೂ.1.40 ಲಕ್ಷಕ್ಕೆ ತಮ್ಮದಾಗಿಸಿಕೊಂಡಿದ್ದಾರೆ.
ರೆಡ್ಡಿಗೆ ಹುಂಡೈ ಸೋನಾಟಾ ಕಾರು ಕೇವಲ ರೂ. 40 ಸಾವಿರಕ್ಕೆ ದೊರಕಿದರೆ, ಹೊಂಡಾ ಎಕಾರ್ಡ್ ಕಾರು ಕೇವಲ 1 ಲಕ್ಷಕ್ಕೆ ದೊರಕಿದಂತಾಗಿದೆ. ವ್ಯಾಟ್ ಸೇರಿ ಒಟ್ಟು 1.58, 900 ಹಣ ನೀಡಿ ಎರಡೂ ಕಾರುಗಳನ್ನು ಖರೀದಿಸಿದ್ದಾರೆ.
ಕಾರು ಹಳೆಯದಾದರೂ, ಕಾರುಗಳ ಲುಕ್ ಬದಲಾಗಿಲ್ಲ. ಕಂಡೀಷನ್ ಕೂಡ ಚೆನ್ನಾಗಿವೆ ಎಂದು ಹನುಮಂತ ರೆಡ್ಡಿ ಹೇಳಿಕೊಂಡಿದ್ದಾರೆ. ಇನ್ನು ಮಲ್ಯ ಒಡೆತನದ ಒಟ್ಟು 52 ವಾಹನಗಳನ್ನು ಹರಾಜು ಹಾಕಲಾಗಿದ್ದು, ಅದರಿಂದ ಬಂದ ಹಣದಲ್ಲಿ ಸಾಲ ತುಂಬಿಕೊಳ್ಳಲಾಗುತ್ತಿದೆ.
ಇನ್ನು ವಿಜಯ್ ಮಲ್ಯ ಆಸ್ತಿ ಖರೀದಿಗೆ ವ್ಯಕ್ತವಾಗುತ್ತಿರುವ ನೀರಸ ಪ್ರತಿಕ್ರಿಯೆಯೇ ಈ ಅಗ್ಗದ ಹರಾಜಿಗೆ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಹರಾಜಿನಲ್ಲಿ ಪಾಲ್ಗೊಂಡವರು ಮಾತ್ರ ಕಡಿಮೆ ಬೆಲೆಗೆ ದುಬಾರಿ ಕಾರು ಕೊಂಡ ಖುಷಿಯಲ್ಲಿದ್ದಾರೆ.
Advertisement