
ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದೇಶಿತ ಹೆಲ್ತ್ ಕಾರ್ಡ್ ಯೋಜನೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆಯಾದರೂ, ಖಾಸಗಿ ಆಸ್ಪತ್ರೆಗಳು ಮಾತ್ರ ಗೊಂದಲಜದಲ್ಲಿ ಮುಳುಗುವಂತೆ ಮಾಡಿದೆ.
2018ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿವಿಧ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದು, ಇದಕ್ಕೆ ನೂತನ ಸೇರ್ಪಡೆ ಎಂದರೆ ಹೆಲ್ತ್ ಕಾರ್ಡ್ ಯೋಜನೆ. ಪ್ರಸ್ತುತ ವಿವಿಧ ಯೋಜನೆಗಳ ಸರ್ಕಾರದ ಆರೋಗ್ಯ ವಿಮೆಗಳನ್ನು ಒಗ್ಗೂಡಿಸಿ ಏಕರೂಪದ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದು ಸಿದ್ದರಾಮಯ್ಯ ಸರ್ಕಾರದ ಯೋಜನೆಯಾಗಿದೆ. ಇದಕ್ಕಾಗಿ ಹೆಲ್ತ್ ಕಾರ್ಡ್ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ನಿರ್ಧರಿಸಿದೆ.
ಆದರೆ ಸರ್ಕಾರ ಈ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳು ಆರೋಪಿಸುತ್ತಿದ್ದು. ಯೋಜನೆಯಲ್ಲಿ ಸರ್ಕಾರದ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳನ್ನೂ ಒಳಪಡಿಸಿದ್ದು, ಈ ಯೋಜನೆಗೆ ಖಾಸಗಿ ಆಸ್ಪತ್ರೆಗಳು ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಎಂಬುದೂ ಕೂಡ ದೊಡ್ಡ ಮಟ್ಟದ ಪ್ರಶ್ನೆಯಾಗಿದೆ.
ಇನ್ನು ಆರೋಗ್ಯ ಇಲಾಖೆಯ ಹೊಸ ಯೋಜನೆ ಬಗ್ಗೆ ಸಚಿವ ಸಂಪುಟ ಸದಸ್ಯರಲ್ಲೇ ಒಮ್ಮತವಿಲ್ಲ ಎಂದು ಹೇಳಲಾಗುತ್ತಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಯಶಸ್ವಿನಿ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿರುವಾಗ ಹೊಸ ಯೋಜನೆ ಜಾರಿಗೆ ತಂದು ಚುನಾವಣೆ ಸಂದರ್ಭದಲ್ಲಿ ಗೊಂದಲಗಳಾದರೆ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಅಳುಕು ಸರ್ಕಾರದ ಹಿರಿಯ ಸಚಿವರಲ್ಲಿ ಮೂಡಿದೆ. ಇದೇ ಕಾರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವಿತ ಯೋಜನೆ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಅಲ್ಲದೇ, ಸರ್ಕಾರಿ ಆದೇಶ ಹೊರಬೀಳುವ ಮುನ್ನ ಹಣಕಾಸು ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಮಾಡುವಂತೆ ಆರೋಗ್ಯ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ.
ವರ್ಗ-ಎ ವ್ಯಾಪ್ತಿಯಲ್ಲಿರುವವರಿಗೆ ಸಂಪೂರ್ಣ ಉಚಿತ ಎಂದು ಈಗ ಹೇಳಲಾಗುತ್ತಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಸ್ಪಷ್ಟತೆ ಮೂಡಿಲ್ಲ. ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ ಬಗ್ಗೆ ಎಲ್ಲೂ ಪ್ರಸ್ತಾಪವಿಲ್ಲ. ಜತೆಗೆ ಸರ್ಕಾರ ಮರು ಪಾವತಿ ಮಾಡುವ ಚಿಕಿತ್ಸೆಯ ದರಪಟ್ಟಿ ಮರುನಿಗದಿ ಮಾಡುವಂತೆಯೂ ಖಾಸಗಿ ಆಸ್ಪತ್ರೆಗಳು ಒತ್ತಡ ಹೇರಿವೆ. ಹೀಗಿರುವಾಗ ಹೊಸ ಯೋಜನೆ ಜಾರಿ ಅಷ್ಟು ಸುಲಭವಲ್ಲ ಎಂದು ಸಂಪುಟದ ಹಿರಿಯ ಸದಸ್ಯರೇ ಅಭಿಪ್ರಾಯಟ್ಟಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಮದನ್ ಗಾಯಕ್ವಾಡ್ ಅವರು, ಖಾಸಗಿ ಆಸ್ಪತ್ರೆಗಳನ್ನು ಒಳಗೊಂಡಿರುವ ಹೆಲ್ತ್ ಕಾರ್ಡ್ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಆದರೆ ಯೋಜನೆ ಕುರಿತಂತೆ ಈ ವರೆಗೂ ಸರ್ಕಾರ ಖಾಸಗಿ ಆಸ್ಪತ್ರೆಗಳ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಿಲ್ಲ. ಯೋಜನೆಯ ಬಗ್ಗೆ ಖಾಸಗಿ ಆಶ್ಪತ್ರೆಗಳಿಗೆ ಸಾಕಷ್ಟು ಪ್ರಶ್ನೆಗಳಿದ್ದು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕಿದೆ. ಇದಕ್ಕೂ ಮೊದಲೇ ಯೋಜನೆ ಜಾರಿ ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ.
ಸರ್ಕಾರ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಬಹುದು ಎಂದು ಸರ್ಕಾರ ಹೇಳುತ್ತಿದೆಯಾದರೂ ಈ ಯೋಜನೆಯ ಬಗ್ಗೆಯೇ ಖಾಸಗಿ ಆಸ್ಪತ್ರೆಗಳಿಗೆ ಸ್ಪಷ್ಟತೆ ಇಲ್ಲ. ಹೀಗಿರುವಾಗ ಹೆಲ್ಚ್ ಕಾರ್ಡ್ ಯೋಜನೆ ಜಾರಿ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಕ್ಕೂಟದ ಬಹುತೇಕ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಯೋಜನೆ ಕುರಿತು ಸ್ಪಷ್ಚತೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
Advertisement