ನಕಲಿ ಜಾತಿ ಪ್ರಮಾಣಪತ್ರ: ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ರೆಡ್ಡಿ ಸದಸ್ಯತ್ವ ಅನರ್ಹಗೊಳಿಸಿದ ಹೈಕೋರ್ಟ್

Published On :
ಧಾರವಾಡ: ನಕಲಿ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ನೀಡಿ ಬಿಜೆಪಿಯಿಂದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಭಾರತಿ ರೆಡ್ಡಿ ಅವರ ಸದಸ್ಯತ್ವನ್ನು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ರದ್ದುಗೊಳಿಸಿದೆ.
ನಕಲಿ ದಾಖಲೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾರತಿ ರೆಡ್ಡಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿದ ಧಾರವಾಡ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ಇಂದು ವಿಭಾಗೀಯ ಪೀಠ ಎತ್ತಿಹಿಡಿದಿದೆ. ಅಲ್ಲದೆ ಸುಳ್ಳು ಆದಾಯ ಪ್ರಮಾಣಪತ್ರ ನೀಡಿದ ಉಪ ತಹಶಿಲ್ದಾರ್ ಸುರೇಶ್ ಅವರನ್ನು ಅಮಾನತು ಮಾಡಲು ಸೂಚಿಸಿದೆ.
ಭಾರತಿ ರೆಡ್ಡಿ ಅವರು ಆದಾಯ ಹೆಚ್ಚಿದ್ದರೂ, ಆದಾಯ ತೆರಿಗೆ ಪಾವತಿಸುತ್ತಿದ್ದರೂ ಅದನ್ನು ಮರೆ ಮಾಚಿ, ತಾವು ಹಿಂದುಳಿದ ವರ್ಗದ ಬಿ ವರ್ಗಕ್ಕೆ ಸೇರಿದವರೆಂದು ಕುರುಗೋಡು ಉಪ ತಹಶಿಲ್ದಾರ್ ಅವರಿಂದ ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿ, ಅಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಿ ಸಿದ್ದಪ್ಪ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದರು.
ಸಿದ್ದಪ್ಪ ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಕಳೆದ ಜುಲೈನಲ್ಲಿ ಭಾರತಿ ರೆಡ್ಡಿ ಅವರನ್ನು ಅನರ್ಹಗೊಳಿಸಿತ್ತು. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಭಾರತಿ ರೆಡ್ಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮತ್ತೊಮ್ಮೆ ವಿಭಾಗೀಯ ಪೀಠದಿಂದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು.
2016ರ ಏಪ್ರಿಲ್ ನಲ್ಲಿ ಬಳ್ಳಾರಿ ತಾಲೂಕಿನ ಬಾದನಹಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾರತಿ ರೆಡ್ಡಿ ಅವರು ಇಂದು ಜಿ.ಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆ ಮುಗಿಯುವಷ್ಟರಲ್ಲಿ ಹೈಕೋರ್ಟ್ ತೀರ್ಪು ಹೊರಬಿದ್ದು ಅಧ್ಯಕ್ಷ ಸ್ಥಾನ ಕೈಜಾರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


